ತುಮಕೂರು,ಅ.6-ಕುಣಿಗಲ್ ತಾಲ್ಲೂಕಿನ ಪ್ರಸಿದ್ಧ ಯಡಿಯೂರು ಶ್ರೀಕ್ಷೇತ್ರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ವಿಧಾನ ಪರಿಷತ್ ಉಪಸಭಾಪತಿ ಡಾ. ಉಮಾಶ್ರೀ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮಂಗಳವಾದ್ಯಗಳೊಂದಿಗೆ ಡಾ. ಉಮಾಶ್ರೀ ಅವರನ್ನು ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀ ತೋಂಟದ ಸಿದ್ಧಲಿಂಗೇಶ್ವರರ ನಿರ್ವಿಕಲ್ಪ ಶಿವಯೋಗ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿಗೆ ಉತ್ತಮ ಮಳೆ-ಬೆಳೆ ಆಗಲಿ, ನಾಡಿನ ಸರ್ವ ಜನರಿಗೂ ಒಳಿತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ನಂತರ ದೇವಾಲಯದ ವ್ಯವಸ್ಥಾಪನಾ ಮಂಡಳಿ ವತಿಯಿಂದ ಡಾ. ಉಮಾಶ್ರೀ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದ ಸಹಭಕ್ತರೊಂದಿಗೆ ಬೆರೆತ ಅವರು, ಯೋಗಕ್ಷೇಮ ವಿಚಾರಿಸಿದರು.
ಬಳಿಕ ಯಡಿಯೂರು ಶ್ರೀಕ್ಷೇತ್ರದ ಪ್ರಸಾದ ಮಂದಿರಕ್ಕೆ ತೆರಳಿದ ಡಾ. ಉಮಾಶ್ರೀ ಅವರು, ಪ್ರಸಾದ ಮಂದಿರದ ಮಹಿಳೆಯರೊಂದಿಗೆ ಸೇರಿ ಹೋಳಿಗೆ ತಯಾರಿಸುವ ಕಾರ್ಯದಲ್ಲಿ ಭಾಗವಹಿಸಿದರು. ನಂತರ ಭೋಜನಾಲಯದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದಾಸೋಹಕ್ಕೆ ಚಾಲನೆ ನೀಡಿದರು.
ಸಹಭಕ್ತರಿಗೆ ಭೋಜನ ಬಡಿಸಿ, ತಾವೂ ಅವರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿ ಸಂತಸಪಟ್ಟರು. ಈ ಸಂದರ್ಭದಲ್ಲಿ ಉಪಸಭಾಪತಿ ಅವರ ಹಿರಿಯ ಆಪ್ತ ಸಹಾಯಕ ರಾಮಮೂರ್ತಿ ಸೇರಿದಂತೆ ದೇವಾಲಯದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.
