ಚಿಕ್ಕಮಗಳೂರು, ಅ.6- ರಾಜ್ಯದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಇತ್ತೀಚೆಗೆ ಉಂಟಾದ ತಾತ್ಕಾಲಿಕ ವ್ಯತ್ಯಯವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. ಮುಂದಿನ ಬೇಸಿಗೆಯಲ್ಲಿ ವಿದ್ಯುತ್ ಕೊರತೆಯಾಗದಂತೆ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದ ಕುರಿತು ಮಾತನಾಡಿದ ಅವರು, ಕಳೆದ ಕೆಲವು ದಿನಗಳಲ್ಲಿ ಮಾತ್ರ ಒಂದು ಗಂಟೆಯಿಂದ ಒಂದೂವರೆ ಗಂಟೆಯವರೆಗೆ ಸಮಸ್ಯೆ ಉಂಟಾಗಿತ್ತು. ಎಸ್ಎಸ್ಎಲ್ಸಿ ಪರೀಕ್ಷೆಯ ಸಂದರ್ಭದಲ್ಲಿ ಸುಮಾರು 20 ಸಾವಿರ ಮೆಗಾವಾಟ್ ವಿದ್ಯುತ್ ಬೇಡಿಕೆಯಿದ್ದಾಗ, ಹೆಚ್ಚುವರಿ ವಿದ್ಯುತ್ ಲಭ್ಯವಿಲ್ಲದಿರುವುದು ಹಾಗೂ ಆರ್ಟಿಪಿಸಿಯ ಒಂದು ಘಟಕ ಸ್ಥಗಿತಗೊಂಡಿದ್ದರಿಂದ ತಾತ್ಕಾಲಿಕ ವ್ಯತ್ಯಯ ಎದುರಾಗಿತ್ತು ಎಂದರು.
ರಾಜ್ಯದಲ್ಲಿ ಲೋಡ್ಶೆಡ್ಡಿಂಗ್ ಜಾರಿಗೊಳಿಸಿಲ್ಲ. ಮಳೆ ಕೊರತೆಯಿಂದ ರೈತರು ಬೆಳೆ ಉಳಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಪಂಪ್ಸೆಟ್ಗಳನ್ನು ಬಳಸುತ್ತಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಸ್ಥಳೀಯ ಮಟ್ಟದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪಂಪಿಂಗ್ ಸ್ಟೇಷನ್ ನಿರ್ಮಾಣಕ್ಕೆ 125 ಎಕರೆ ಭೂಮಿ ಅಗತ್ಯವಿದ್ದು, ಪೈಪ್ಲೈನ್ ಅಳವಡಿಕೆ ಬಳಿಕ ಬಹುತೇಕ ಭೂಮಿಯನ್ನು ಮಣ್ಣಿನಿಂದ ಮುಚ್ಚಲಾಗುತ್ತದೆ. ಶಾಶ್ವತ ನಿರ್ಮಾಣಕ್ಕೆ ಸುಮಾರು 25 ಎಕರೆ ಮಾತ್ರ ಬೇಕಾಗುತ್ತದೆ. ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಗತ್ಯ ಅನುಮತಿಗಳು ದೊರೆತ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
