ಬೆಂಗಳೂರು,ಆ.20- ಶ್ರಾವಣ ಮಾಸದ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಬೆಲೆ ಏರಿಕೆ ನಡುವೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಧಾನಿಯ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಗಾಂಧಿಬಜಾರ್, ಉಲ್ಲಾಳ ಮುಖ್ಯರಸ್ತೆ, ವಿಜಯನಗರ, ಜಯನಗರ, ಬನಶಂಕರಿ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಜನರು ನಿರತರಾಗಿದ್ದು ಎಲ್ಲಿ ನೋಡಿದರೂ ಜನಜಂಗುಳಿಯಿಂದ ಗಿಜಗುಡುತ್ತಿದೆ.
ಹೂ-ಹಣ್ಣು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಬಾಳೆಕಂದು, ದಿನಸಿ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.ಇಂದು ಬೆಳಿಗ್ಗೆ ಕೆ.ಆರ್.ಮಾರುಕಟ್ಟೆಯಲ್ಲಿ ಕಣ್ಣಾಯಿಸಿದ ಕಡೆಯಲ್ಲೆಲ್ಲಾ ಜನವೋ ಜನ. ಮುಂಜಾನೆ 3 ಗಂಟೆಗೆ ಮಾರುಕಟ್ಟೆಗೆ ಜಮಾಯಿಸಿದ್ದ ಜನರು ಹೂ-ಹಣ್ಣು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ವ್ಯಾಪಾರಿಗಳು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಮಾರುಕಟ್ಟೆಯ ಸುತ್ತಮುತ್ತ ಸಂಚಾರದಟ್ಟಣೆ ಉಂಟಾಗಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಬೆಲೆ ಏರಿಕೆ ಬಿಸಿ : ಬೆಲೆ ಏರಿಕೆ ಬಿಸಿ ಜನಸಾಮಾನ್ಯರು ಹಾಗೂ ಮಧ್ಯಮವರ್ಗದವರಿಗೆ ತಟ್ಟಿದ್ದು, ಬರದ ಹಿನ್ನೆಲೆಯಲ್ಲಿ ಇಳುವರಿ ಕುಂಠಿತವಾಗಿ ಹೂ-ಹಣ್ಣು ಮತ್ತು ತರಕಾರಿ ಪೂರೈಕೆಯಲ್ಲಿ ಭಾರೀ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಳೆದ 2 ವಾರಗಳಿಗೆ ಹೋಲಿಸಿದರೆ ಕಳೆದ 3 ದಿನಗಳಿಂದ ದುಬಾರಿಯಾಗಿದೆ.
ಕನಕಾಂಬರ ಅಂಬರಕ್ಕೆ ಮುಟ್ಟಿದ್ದು ಕೆಜಿಗೆ 2,000 ರೂ.ಗಳಿಂದ 2,500 ರೂ.ಗೆ, ಸೇವಂತಿಗೆ 400 ರೂ., ಗುಲಾಬಿ 350 ರೂ., ಮಲ್ಲಿಗೆ 600 ರೂ., ಜೋಡಿ ಕಮಲ 100 ರೂ., ಡೇರೆ 600 ರೂ.ಗೆ ಮಾರಾಟವಾಗುತ್ತಿದ್ದರೆ ಹಣ್ಣುಗಳ ಬೆಲೆಯೂ ಸಹ ಗಗನಕ್ಕೇರಿದೆ.ಕೆಜಿ ಸೇಬು 250 ರೂ., ದಾಳಿಂಬೆ 200, ಏಲಕ್ಕಿ ಬಾಳೆ 120 ರೂ.ಗಳಿಂದ 150 ರೂ., ಮೂಸಂಬಿ 100 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಬಾಳೆಕಂದು ಜೋಡಿಗೆ ಗಾತ್ರಕ್ಕೆ ತಕ್ಕಂತೆ 50 ರೂ.ಗಳಿಂದ 200 ರೂ.ಗೆ ಮಾರಾಟವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಕಳಸ ಇಟ್ಟು ಸೀರೆ ಉಡಿಸುವ ಶ್ರಮ ತಪ್ಪಿಸಲು ಮಾರುಕಟ್ಟೆಗಳಲ್ಲಿ ತರಹೇವಾರಿ ರೆಡಿಮೇಡ್ ಲಕ್ಷ್ಮಿದೇವಿಯ ವಿಗ್ರಹಗಳು, ಮುಖವಾಡಗಳು ಬಂದಿದ್ದು, ವಿನ್ಯಾಸ ಹಾಗೂ ಎತ್ತರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಫ್ಯಾನ್ಸಿ ಸ್ಟೋರ್ ಮತ್ತು ಗ್ರಂದಿಗೆ ಅಂಗಡಿಗಳಲ್ಲಿ ಇವುಗಳ ಖರೀದಿ ಜೋರಾಗಿದೆ. ಬೆಂಗಳೂರು ಮಾತ್ರವಷ್ಟೇ ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಮತ್ತಿತರ ಮಾರುಕಟ್ಟೆಗಳಲ್ಲಿ ಖರೀದಿ ಹೆಚ್ಚಾಗಿ ಕಂಡುಬಂದಿದೆ.
ವರುಣನ ಅಡ್ಡಿ : ಹಬ್ಬದ ತಯಾರಿಯಲ್ಲಿದ್ದವರಿಗೆ ಹಾಗೂ ವ್ಯಾಪಾರಿಗಳಿಗೆ ಇಂದು ವರುಣ ಅಡ್ಡಿಯನ್ನುಂಟು ಮಾಡಿದ್ದಾನೆ. ಬೆಳಿಗ್ಗೆ ಮಾರುಕಟ್ಟೆಗಳಿಗೆ ಜನರು ಲಗ್ಗೆ ಇಟ್ಟಿದ್ದು ನಗರದಲ್ಲಿ ಕೆಲವೆಡೆ ಮಳೆ ಬಂದಿದ್ದು ವ್ಯಾಪಾರಕ್ಕೆ ತೊಡಕುಂಟಾಗಿತ್ತು. ಇದರಿಂದ ಪ್ರಮುಖ ಮಾರುಕಟ್ಟೆಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
