ಬೆಂಗಳೂರು,ಸೆ.10-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬದವರಿಗೆ ಸೇರಿದ ನಿವಾಸಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯಾಚರಣೆಯು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.ಪಂಚನಾಮೆ ಹಾಗೂ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಇಡಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಬೆಂಗಳೂರು, ಬೆಳಗಾವಿ, ಗೋಕಾಕ್ ಸೇರಿದಂತೆ ರಾಜ್ಯದ ಒಟ್ಟು 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಸಚಿವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಆಪ್ತರ ಮನೆಗಳಲ್ಲಿ ತನಿಖೆ ಮುಂದುವರಿದಿದೆ.
ಮೊದಲ ದಿನವಾದ ಬುಧವಾರ ಸುಮಾರು 18 ಗಂಟೆಗಳ ಕಾಲ ಸಚಿವರನ್ನು ಮತ್ತು ಸಂಬಂಧಿಕರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ದಾಖಲೆಗಳ ಪರಿಶೀಲನೆಗಾಗಿ ಶೋಧ ಮುಂದುವರೆದಿದೆ.
ಬುಧವಾರ ಆರಂಭವಾದ ಈ ಕಾರ್ಯಾಚರಣೆ ಬೆಳಗಾವಿ, ಗೋಕಾಕ್, ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟು ಸುಮಾರು 18 ಸ್ಥಳಗಳನ್ನು ಒಳಗೊಂಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿದೇಶಿ ಹಣಕಾಸು ವ್ಯವಹಾರಗಳು ಮತ್ತು ವಿದೇಶಿ ಹೂಡಿಕೆಗಳ ಕುರಿತು ಇಆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ರಾತ್ರಿ ಶೋಧ ಕಾರ್ಯಾಚರಣೆ ಸುಮಾರು ರಾತ್ರಿ 2 ಗಂಟೆಯವರೆಗೆ ಮುಂದುವರಿದಿದ್ದು, ಗುರುವಾರ ಬೆಳಗ್ಗೆ ಸುಮಾರು 6 ಗಂಟೆಯಿಂದ ಮತ್ತೆ ಶೋಧ ಆರಂಭವಾಗಿದೆ. ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಇಆ ಅಧಿಕಾರಿಗಳು ವಿಚಾರಣೆ ನಡೆಸಿ, ಕೆಲವು ಹಣಕಾಸು ವ್ಯವಹಾರಗಳು ಮತ್ತು ದಾಖಲೆಗಳ ಕುರಿತು ಸ್ಪಷ್ಟನೆ ಕೇಳಿದ್ದಾರೆ ಎನ್ನಲಾಗಿದೆ.
ಜಾರಕಿಹೊಳಿ ಕುಟುಂಬದ ರಾಜಕೀಯ ಹಾಗೂ ವ್ಯಾಪಾರ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಇಆ ಕಾರ್ಯಾಚರಣೆಯ ತೀವ್ರತೆ ಹೆಚ್ಚಾಗಿದೆ. ಸಚಿವರ ಬೆಳಗಾವಿ ನಿವಾಸದ ಜೊತೆಗೆ ಗೋಕಾಕ್ ಮತ್ತು ಬೆಳಗಾವಿ ನಗರದಲ್ಲಿರುವ ಕೆಲವು ಆಪ್ತರು ಹಾಗೂ ಕುಟುಂಬದೊಂದಿಗೆ ಸಂಪರ್ಕ ಹೊಂದಿರುವವರ ಮನೆ, ಕಚೇರಿಗಳಲ್ಲೂ ಶೋಧ ನಡೆದಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿಯೂ ಶೋಧ ನಡೆದಿರುವುದಾಗಿ ವರದಿಯಾಗಿದೆ. ಸಚಿವರ ಬಾಮೈದ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ.ಡಿ. ಮಂಜುನಾಥ್ ಅವರ ನಿವಾಸವನ್ನೂ ಮತ್ತೊಮೆ ಪರಿಶೀಲಿಸಲಾಗಿದೆ.
ಈ ಪ್ರಕರಣದ ಪ್ರಮುಖ ಅಂಶವಾಗಿ ಜಾರಕಿಹೊಳಿ ಕುಟುಂಬಕ್ಕೆ ಸಂಬಂಧಿಸಿದ ಎನ್ನಲಾದ ವಿದೇಶಿ ಹೂಡಿಕೆ ಮತ್ತು ಹಣ ವರ್ಗಾವಣೆಗಳ ಹಾದಿಯನ್ನು ಇಆ ಪರಿಶೀಲಿಸುತ್ತಿದೆ. ವಿಶೇಷವಾಗಿ ಆಫ್ರಿಕಾದ ಕೆಲವು ದೇಶಗಳಲ್ಲಿ?ವರದಿಗಳ ಪ್ರಕಾರ ರುವಾಂಡಾ ಮತ್ತು ಉಗಾಂಡಾ?ಸಕ್ಕರೆ ಉದ್ಯಮ, ಗಣಿಗಾರಿಕೆ ಹಾಗೂ ಇತರ ವಾಣಿಜ್ಯ ಯೋಜನೆಗಳಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಸ್ತುತ ಇಡಿ ಕಾರ್ಯಾಚರಣೆಗೆ ಮತ್ತೊಂದು ಪ್ರಮುಖ ಹಿನ್ನೆಲೆ 2026ರ ಜೂನ್‌ನಲ್ಲಿ ನಡೆದ ಅಬಕಾರಿ ಇಲಾಖೆ ಸಂಬಂಧಿತ ಶೋಧ.ಜೂನ್ 24ರಂದು ಇಡಿ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಹಾಗೂ ಸತೀಶ್ ಜಾರಕಿಹೊಳಿ ಅವರ ಬಾಮೈದ ವೈ.ಡಿ.ಮಂಜುನಾಥ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿತ್ತು. ಆ ತನಿಖೆ ಲೋಕಾಯುಕ್ತ ಪೊಲೀಸ್ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ನಡೆದಿತ್ತು ಎಂದು ವರದಿಯಾಗಿದೆ.
ಆ ಸಂದರ್ಭದಲ್ಲಿ ಇಡಿ, ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನು ಒಳಗೊಂಡ ವ್ಯವಸ್ಥಿತ ಲಂಚ ಸಂಗ್ರಹ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿತ್ತು. ಪರವಾನಗಿ ನೀಡಿಕೆ ಮತ್ತು ನವೀಕರಣಕ್ಕೆ ಸಂಬಂಧಿಸಿದ ಹಣದ ಹರಿವನ್ನು ಪರಿಶೀಲಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿತ್ತು.
ಇದೇ ಹಿಂದಿನ ತನಿಖೆಯ ವೇಳೆ ದೊರೆತ ಕೆಲವು ದಾಖಲೆಗಳು ಹಾಗೂ ಹಣಕಾಸು ಮಾಹಿತಿಯಿಂದ ವಿದೇಶಿ ವ್ಯವಹಾರಗಳ ಸುಳಿವು ಸಿಕ್ಕಿರಬಹುದು ಎಂಬುದು ಈಗಿನ ತನಿಖೆಯ ಪ್ರಮುಖ ಅಂಶವಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದಾಗ್ಯೂ, ಪ್ರಸ್ತುತ ಶೋಧವನ್ನು ಹಿಂದಿನ ಮಂಜುನಾಥ್ ಅಬಕಾರಿ ಪ್ರಕರಣಕ್ಕೆ ನೇರವಾಗಿ ಜೋಡಿಸಲಾಗಿದೆಯೇ ಅಥವಾ ಪ್ರತ್ಯೇಕ ತನಿಖೆಯೇ ಎಂಬ ವಿಚಾರದಲ್ಲಿ ವರದಿಗಳಲ್ಲಿ ವ್ಯತ್ಯಾಸವಿದೆ. ಇತ್ತೀಚಿನ ವರದಿಗಳ ಪ್ರಕಾರ ಇಆ ಇದನ್ನು ವಿದೇಶಿ ವ್ಯವಹಾರಗಳ ಕುರಿತ ಪ್ರತ್ಯೇಕ ತನಿಖೆಯಾಗಿ ಪರಿಗಣಿಸುತ್ತಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಈಇಒಂ) ಉಲ್ಲಂಘಿಸಿ ಆಫ್ರಿಕಾ ಸೇರಿದಂತೆ ಹೊರದೇಶಗಳಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಹಾಗೂ ಕಬ್ಬಿಣದ ಅದಿರು ಗಣಿಗಾರಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.
ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಆಡಳಿತರೂಢ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪ್ರಮುಖರು ಈ ದಾಳಿಗಳನ್ನು ರಾಜಕೀಯ ಪ್ರೇರಿತ ಎಂದು ಬಲವಾಗಿ ಖಂಡಿಸಿದ್ದಾರೆ. ವಿರೋಧ ಪಕ್ಷದವರನ್ನು ಗುರಿಯಾಗಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
