ಹುಬ್ಬಳ್ಳಿ, ಸೆ.10- ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹೆಸರಿನಲ್ಲಿ ರಾತ್ರಿ 10 ಗಂಟೆಯ ನಂತರ ಯಾವುದೇ ಕಾರಣಕ್ಕೂ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಕಮಿಷನರ್ ಕಚೇರಿಯಲ್ಲಿ ಅವರ ನೇತೃತ್ವದಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಡಿಜೆ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಈ ಸೂಚನೆ ನೀಡಲಾಯಿತು.
ಕೆಲವು ವರ್ಷಗಳಿಂದ ದೇಶದ ವಿವಿಧೆಡೆ ಡಿಜೆಯಿಂದ ಉಂಟಾದ ಅನಾಹುತಗಳ ಕುರಿತು ಕಮಿಷನರ್ ಮಾಹಿತಿ ನೀಡಿದರು. ಹಬ್ಬದ ಸಂಭ್ರಮ ಮತ್ತೊಬ್ಬರ ಬದುಕಿನಲ್ಲಿ ಕಣ್ಣೀರು ತರಿಸುವಂತಾಗಬಾರದು ಎಂದು ಅವರು ಸಲಹೆ ನೀಡಿದರು.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸೌಂಡ್ ಸಿಸ್ಟಮ್ ಖರೀದಿಸಿ, ನಿಯಮ ಉಲ್ಲಂಘಿಸಿ ಡಿಜೆ ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. 75 ಡೆಸಿಬಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಡಿಜೆ ಸದ್ದು ಮಾಡಿದರೆ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋಳಿ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ಮಾತ್ರ ನಮಗೆ ಹೆಚ್ಚಿನ ಬಾಡಿಗೆ ದೊರೆಯುತ್ತದೆ. ನಿಯಮಾವಳಿಗಳನ್ನು ಮೀರಿ ಡಿಜೆ ಬಳಸುವುದಿಲ್ಲ ಎಂದು ಡಿಜೆ ಮಾಲೀಕರು ಸಭೆಯಲ್ಲಿ ಭರವಸೆ ನೀಡಿದರು. ಹಬ್ಬದ ದಿನಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅಗತ್ಯ. ಎಲ್ಲರೂ ಸಹಕರಿಸಿ ಸಂತೋಷದಿಂದ ಹಬ್ಬ ಆಚರಿಸೋಣ ಎಂದು ಕಮಿಷನರ್ ಮನವಿ ಮಾಡಿದರು.
