Homeರಾಜ್ಯಅರ್ಹ ಮತದಾರರ ಮರು ಸೇರ್ಪಡೆಗೆ ಚುನಾವಣಾ ಆಯೋಗ ಸಿದ್ಧತೆ

ಅರ್ಹ ಮತದಾರರ ಮರು ಸೇರ್ಪಡೆಗೆ ಚುನಾವಣಾ ಆಯೋಗ ಸಿದ್ಧತೆ

ಬೆಂಗಳೂರು,ನ.8- ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳು ಕೈಬಿಟ್ಟಿರುವ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆ 5.54 ಕೋಟಿಯಿಂದ ಸುಮಾರು 4.46 ಕೋಟಿಗೆ ಇಳಿಕೆಯಾಗಿರುವ ಬೆನ್ನಲ್ಲೇ, ಅಳಿಸಲ್ಪಟ್ಟ ಅಥವಾ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲು ಚುನಾವಣಾ ಆಯೋಗ ವಿಶೇಷ ನೋಂದಣಿ ಅಭಿಯಾನ ನಡೆಸಲು ಸಿದ್ಧತೆ ನಡೆಸುತ್ತಿದೆ.

ಒಂದೆಡೆ ಕಾಂಗ್ರೆಸ್‌‍, ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಬಡವರು, ಕಾ=ರ್ಮಿಕರು, ವಲಸೆ ಕಾರ್ಮಿಕರು, ಅಂಚಿನ ಸಮುದಾಯಗಳು ಸೇರಿದಂತೆ ಅರ್ಹ ಮತದಾರರ ಹೆಸರುಗಳು ದೊಡ್ಡ ಪ್ರಮಾಣದಲ್ಲಿ ಕೈಬಿಟ್ಟಿವೆ ಎಂದು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಎಸ್‌‍ಐಆರ್‌ ಕಾನೂನುಬದ್ಧವಾಗಿ ಪೂರ್ಣಗೊಂಡಿರುವ ಪರಿಷ್ಕರಣೆ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದೆ. ಈ ನಡುವೆ ನಿಜವಾದ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸುವುದಾಗಿ ಚುನಾವಣಾ ಆಯೋಗವೂ ಸ್ಪಷ್ಟಪಡಿಸಿದೆ.

1.07 ಕೋಟಿ ಮತದಾರರು ASDDO ಪಟ್ಟಿಯಲ್ಲಿ :
ಎಸ್‌‍ಐಆರ್‌ ಸಂದರ್ಭದಲ್ಲಿ ಸುಮಾರು 1.07 ಕೋಟಿ ಮತದಾರರನ್ನು ASDDO ವರ್ಗದ ಅಡಿಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಗೈರುಹಾಜರಿ, ಸ್ಥಳಾಂತರಗೊಂಡವರು, ಮೃತರು, ನಕಲಿ ಹಾಗೂ ಇತರ ಕಾರಣಗಳಿಂದ ಗುರುತಿಸಲ್ಪಟ್ಟ ಮತದಾರರು ಸೇರಿದ್ದಾರೆ.

ಈ ಪೈಕಿ 84,46,605 ಮತದಾರರನ್ನು ಗೈರುಹಾಜರಿ ಅಥವಾ ಸ್ಥಳಾಂತರಗೊಂಡವರು ಎಂದು ವರ್ಗೀಕರಿಸಲಾಗಿದೆ. ಇಂತಹ ಮತದಾರರಲ್ಲಿ ಅರ್ಹರಾಗಿರುವವರನ್ನು ಮರುನೋಂದಣಿ ಮಾಡಲು ವಿಶೇಷ ಅಭಿಯಾನ ನಡೆಸುವಂತೆ ಚುನಾವಣಾ ಆಯೋಗ ಎಸ್‌‍ಐಆರ್‌ ಪೂರ್ಣಗೊಳಿಸಿರುವ ರಾಜ್ಯಗಳಿಗೆ ಸೂಚಿಸಿದೆ.ಚುನಾವಣಾ ನೋಂದಣಿ ಅಧಿಕಾರಿಗಳು ರಾಜಕೀಯ ಪಕ್ಷಗಳೊಂದಿಗೆ ASDDO ಪಟ್ಟಿಗಳನ್ನು ಹಂಚಿಕೊಂಡು, ಅರ್ಹ ಮತದಾರರನ್ನು ಗುರುತಿಸಿ ಮತ್ತೆ ಪಟ್ಟಿಗೆ ಸೇರಿಸಲು ನೆರವಾಗುವ ವ್ಯವಸ್ಥೆ ರೂಪಿಸಲಾಗುತ್ತಿದೆ.

7.87 ಲಕ್ಷ ಫಾರ್ಮ್‌-6 ಅರ್ಜಿಗಳಲ್ಲಿ 76,176 ತಿರಸ್ಕೃತ :
ಎಸ್‌‍ಐಆರ್‌ಗಾಗಿ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಿದ ಜೂನ್‌ 16ರಿಂದ ಸೆಪ್ಟೆಂಬರ್‌ 23ರವರೆಗೆ ಹೊಸ ಮತದಾರರ ಸೇರ್ಪಡೆಗಾಗಿ ಸಲ್ಲಿಸಲಾದ ಸುಮಾರು 7.87 ಲಕ್ಷ ಫಾರ್ಮ್‌-6 ಅರ್ಜಿಗಳಲ್ಲಿ 76,176 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಅರ್ಜಿಗಳ ತಿರಸ್ಕಾರಕ್ಕೆ ಮುಖ್ಯವಾಗಿ ದಾಖಲೆಗಳ ಕೊರತೆ, ಆಧಾರ್‌ ವಿವರಗಳ ಸಮಸ್ಯೆ, ಪರಂಪರೆ ಮ್ಯಾಪಿಂಗ್‌ಗೆ ಸಂಬಂಧಿಸಿದ ಘೋಷಣಾ ನಮೂನೆ ಹಾಗೂ ನಿಗದಿತ ಮಾದರಿಯಲ್ಲದ ಛಾಯಾಚಿತ್ರ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕ್ಕುಮಾರ್‌ ಅವರು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಫಾರ್ಮ್‌-6 ಅರ್ಜಿಗಳನ್ನು ಮರುಪರಿಶೀಲಿಸುವಂತೆ ಸೂಚಿಸಿದ್ದಾರೆ. ವಿಶೇಷವಾಗಿ ದಾಖಲೆಗಳ ಕೊರತೆಯಿಂದ ತಿರಸ್ಕೃತಗೊಂಡ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನಿರ್ದೇಶನ ನೀಡಲಾಗಿದೆ.

ಫಾರ್ಮ್‌-6 ನಿಯಮದಲ್ಲಿ ಬದಲಾವಣೆ :
ಎಸ್‌‍ಐಆರ್‌ ಸಂದರ್ಭದಲ್ಲಿ ಹೊಸ ಮತದಾರರು ಹಿಂದಿನ ಚುನಾವಣಾ ದಾಖಲೆಗಳಲ್ಲಿ ತಮ ಸಂಬಂಧಿಕರ ವಿವರಗಳನ್ನು ನೀಡಿ ಪರಂಪರೆ ಮ್ಯಾಪಿಂಗ್‌ ಮಾಡಬೇಕೆಂಬ ನಿಯಮ ಜಾರಿಯಲ್ಲಿತ್ತು. ಆದರೆ ಇದೀಗ ಚುನಾವಣಾ ಆಯೋಗ ಈ ಅಗತ್ಯವನ್ನು ತೆಗೆದುಹಾಕಿದೆ. ಪರಿಷ್ಕೃತ ಫಾರ್ಮ್‌-6 ವ್ಯವಸ್ಥೆಯಲ್ಲಿ ಅರ್ಜಿದಾರರು ಪರಂಪರೆ ಮ್ಯಾಪಿಂಗ್‌ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿಲ್ಲ. ಇದರಿಂದ ದಾಖಲೆಗಳ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಥವಾ ಅರ್ಜಿ ತಿರಸ್ಕೃತಗೊಂಡ ಅರ್ಹ ಮತದಾರರಿಗೆ ಮತ್ತೆ ಅವಕಾಶ ಸಿಗುವ ಸಾಧ್ಯತೆ ಇದೆ.

1.07 ಕೋಟಿ ಹೆಸರುಗಳ ಅಳಿಕೆ, ಆದರೆ ಮರುಸೇರ್ಪಡೆ ಕೇವಲ 5.6 ಲಕ್ಷ?
ಎಸ್‌‍ಐಆರ್‌ ಅವಧಿಯಲ್ಲಿ 1.07 ಕೋಟಿ ಮತದಾರರನ್ನು ವಿವಿಧ ಕಾರಣಗಳಿಂದ ಹೊರಗಿಡಲಾಗಿದ್ದರೂ, ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ 8,77,104 ಹೊಸ ಮತದಾರರನ್ನು ಮಾತ್ರ ಸೇರಿಸಲಾಗಿದೆ.

ಇವರಲ್ಲಿ 3,13,023 ಮಂದಿ ಮೊದಲ ಬಾರಿಗೆ ಮತದಾರರಾಗಿದ್ದವರು. ಹೀಗಾಗಿ ಹೊರಗುಳಿದವರ ಪೈಕಿ ಸುಮಾರು 5.6 ಲಕ್ಷ ಮಂದಿಯಷ್ಟೇ ಮರುನೋಂದಣಿಯಾಗಿದ್ದಾರೆ ಎಂಬುದು ಚುನಾವಣಾ ಅಧಿಕಾರಿಗಳ ವಿವರಣೆಯಾಗಿದೆ. ಇದೇ ಅಂಶ ಈಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಒಂದು ಕೋಟಿಗೂ ಅಧಿಕ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ಸಂದರ್ಭದಲ್ಲಿ ಮರುಸೇರ್ಪಡೆಯಾದವರ ಸಂಖ್ಯೆ ಏಕೆ ಕಡಿಮೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌‍ ಮುಂದಿಟ್ಟಿದೆ.

RELATED ARTICLES

Latest News