Homeರಾಷ್ಟ್ರೀಯ100ನೇ ವಸಂತಕ್ಕೆ ಕಾಲಿಟ್ಟ ಬಿಜೆಪಿ ಭೀಷ್ಮ ಅಡ್ವಾಣಿ, ವಿಶೇಷ ಲೇಖನ ಬರೆದ ಪ್ರಧಾನಿ ಮೋದಿ

100ನೇ ವಸಂತಕ್ಕೆ ಕಾಲಿಟ್ಟ ಬಿಜೆಪಿ ಭೀಷ್ಮ ಅಡ್ವಾಣಿ, ವಿಶೇಷ ಲೇಖನ ಬರೆದ ಪ್ರಧಾನಿ ಮೋದಿ

ನವದೆಹಲಿ, ನ. 8 (ಪಿಟಿಐ): ಬಿಜೆಪಿ ಹಿರಿಯ ನಾಯಕ ಎಲ್‌‍.ಕೆ. ಅಡ್ವಾಣಿ ಅವರು 100ನೇ ವಸಂತಕ್ಕೆ ಕಾಲಿರಿಸಿದ್ದಾರೆ.ಅಡ್ವಾಣಿ ಅವರು ಇತರರಿಂದ ಭಿನ್ನವಾಗಿಸುವ ಎರಡು ಪ್ರಮುಖ ಗುಣಗಳೆಂದರೆ ಅವರ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬೌದ್ಧಿಕ ತೀಕ್ಷ್ಣತೆ.ಇದರ ಜೊತೆಗೆ, ಭಾರತೀಯ ರಾಜಕೀಯದ ಒಂದು ದೊಡ್ಡ ವರ್ಗವು ಹಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದ್ದ ನಕಲಿ ಜಾತ್ಯತೀತತೆಯನ್ನು ಅವರು ಬಯಲು ಮಾಡಿದ ರೀತಿಯೂ ಅವರನ್ನು ವಿಶಿಷ್ಟವಾಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಡ್ವಾಣಿ ಅವರು ತಮ್ಮ 100ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಲೇಖನವೊಂದರಲ್ಲಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಮಾಜಿ ಉಪಪ್ರಧಾನಿ ಅಡ್ವಾಣಿ ಮತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪರಸ್ಪರ ಸಹಕಾರದೊಂದಿಗೆ ಅತ್ಯುತ್ತಮ ಮಾದರಿಯನ್ನು ಸೃಷ್ಟಿಸಿದರು ಮತ್ತು ಇವರಿಬ್ಬರೂ ಸೇರಿ ಭಾರತೀಯ ರಾಜಕೀಯದ ದಿಕ್ಕನ್ನೇ ಬದಲಿಸಿದರು ಎಂದು ಮೋದಿ ಉಲ್ಲೇಖಿಸಿದ್ದಾರೆ.

ಅಡ್ವಾಣಿ ಮತ್ತು ವಾಜಪೇಯಿ ಎಂಬ ಇಬ್ಬರು ದಿಗ್ಗಜ ರಾಜಕೀಯ ನಾಯಕರು, ಪರಸ್ಪರ ಸ್ಪರ್ಧಿಗಳಾಗದೆ ದಶಕಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದು ಅಪರೂಪದ ಸಂಗತಿ ಎಂದು ಪ್ರಧಾನಿ ಹೇಳಿದ್ದಾರೆ. ಒಬ್ಬ ನಾಯಕರಾಗಿ ಅಡ್ವಾಣಿ ಜಿ ಅವರನ್ನು ಯಾವಾಗಲೂ ಎದ್ದು ಕಾಣುವಂತೆ ಮಾಡುವ ಎರಡು ಗುಣಗಳಿವೆ. ಮೊದಲನೆಯದು, ಅವರ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬೌದ್ಧಿಕ ತೀಕ್ಷ್ಣತೆ. ಇದು ಅವರ ಭಾಷಣಗಳು ಮತ್ತು ಬರಹಗಳಲ್ಲಿ ಎದ್ದು ಕಾಣುತ್ತಿತ್ತು, ಎಂದು ಅವರು ಹೇಳಿದ್ದಾರೆ.

ಜನಸಂಘ (ಬಿಜೆಪಿಯ ಪೂರ್ವ ರೂಪ) ಮತ್ತು ಬಿಜೆಪಿಯ ನಿರ್ಣಯಗಳನ್ನು ಅಡ್ವಾಣಿ ಸ್ವತಃ ರೂಪಿಸಿದ್ದರು. ಆ ನಿರ್ಣಯಗಳು ಇಂದಿಗೂ ಓದಲು ಯೋಗ್ಯವಾಗಿವೆ. ಅಲ್ಲದೆ, ಅವರ ಸಂದರ್ಶನಗಳು ಯಾವಾಗಲೂ ಆಳವಾದ ಒಳನೋಟವುಳ್ಳ ಮತ್ತು ನಿಖರವಾಗಿದ್ದವು ಎಂದು ಪ್ರಧಾನಿ ತಿಳಿಸಿದ್ದಾರೆ. ಎರಡನೆಯದಾಗಿ, ಭಾರತೀಯ ರಾಜಕೀಯದ ಒಂದು ದೊಡ್ಡ ವರ್ಗವು ಹಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದ್ದ ನಕಲಿ ಜಾತ್ಯತೀತತೆಯನ್ನು ಅವರು ಬಯಲು ಮಾಡಿದ ರೀತಿ, ಎಂದು ಭಾರತ ರತ್ನ ಎಲ್‌‍.ಕೆ. ಅಡ್ವಾಣಿ ಜಿ – 100ನೇ ವರ್ಷದಲ್ಲಿ ಎಂಬ ಶೀರ್ಷಿಕೆಯ ಲೇಖನದಲ್ಲಿ ಅವರು ಬರೆದಿದ್ದಾರೆ.

1927ರ ನವೆಂಬರ್‌ 8ರಂದು ಜನಿಸಿದ ಅಡ್ವಾಣಿ, ಇಂದು 99 ವರ್ಷ ಪೂರೈಸಿ, ತಮ್ಮ ಜೀವನದ 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಲಾಲ್‌ ಕೃಷ್ಣ ಅಡ್ವಾಣಿ ಜಿ ಅವರು ಇಂದು, ನವೆಂಬರ್‌ 8ರಂದು ತಮ್ಮ ಜೀವನದ ನೂರನೇ ವರ್ಷಕ್ಕೆ ಪ್ರವೇಶಿಸುತ್ತಿದ್ದಾರೆ. ಈ ವರ್ಷ ಅವರ ಜನ್ಮದಿನವು ದೀಪಾವಳಿಯೊಂದಿಗೆ ಕಾಕತಾಳೀಯವಾಗಿ ಬಂದಿರುವುದು ವಿಶೇಷ. ದೀಪಾವಳಿಯು ಪ್ರಭು ಶ್ರೀ ರಾಮ ಮತ್ತು ದೀಪದೊಂದಿಗೆ ಸಂಬಂಧ ಹೊಂದಿರುವ ಹಬ್ಬವಾಗಿದೆ.

ಇದೇ ಸಮಯದಲ್ಲಿ ನಾವು ಜನಸಂಘದ ಸ್ಥಾಪನೆಯ 75ನೇ ವರ್ಷ, ಡಾ. ಶ್ಯಾಮ ಪ್ರಸಾದ್‌ ಮುಖರ್ಜಿ ಅವರ 125ನೇ ಜಯಂತಿ ಮತ್ತು ಇತ್ತೀಚೆಗಷ್ಟೇ ಆಚರಿಸಲಾದ ಆರ್‌ಎಸ್‌‍ಎಸ್‌‍ನ ನೂರನೇ ವರ್ಷದ ಸಂಭ್ರಮವನ್ನು ಕೂಡ ಗುರುತಿಸುತ್ತಿದ್ದೇವೆ, ಎಂದು ಅವರು ಹೇಳಿದ್ದಾರೆ. ಆಧುನಿಕ ಭಾರತದ ಅನೇಕ ವಿಭಿನ್ನ ಅಧ್ಯಾಯಗಳೊಂದಿಗೆ ತಮ್ಮ ಜೀವನವನ್ನು ಬೆಸೆದುಕೊಂಡಿರುವ ವ್ಯಕ್ತಿಗಳು ಬಹಳ ಕಡಿಮೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಅಡ್ವಾಣಿ ಅವರು 1927ರ ನವೆಂಬರ್‌ 8ರಂದು, ಅಂದರೆ ದೇವ ದೀಪಾವಳಿಯ ದಿನದಂದು ಜನಿಸಿದರು. 1947ರಲ್ಲಿ ಯುವಕರಾಗಿದ್ದಾಗ, ಸಿಂಧ್‌ನಲ್ಲಿನ ತಮ್ಮ ಪರಿಚಿತ ಜಗತ್ತನ್ನು ತೊರೆದು ಬರಬೇಕಾದ ನೋವನ್ನು ಅವರು ಅನುಭವಿಸಿದರು ಎಂದು ಪ್ರಧಾನಿ ತಿಳಿಸಿದರು.ಅಡ್ವಾಣಿ ಅವರು ಯಾವುದೇ ಕಹಿ ಭಾವನೆಯಿಲ್ಲದೆ ಶೂನ್ಯದಿಂದ ತಮ್ಮ ಜೀವನವನ್ನು ಮರುನಿರ್ಮಿಸಿಕೊಂಡರು. ಎಲ್ಲಾ ಅಡೆತಡೆಗಳ ನಡುವೆಯೂ ಶೂನ್ಯದಿಂದ ಕಟ್ಟುವ ಈ ಗುಣವು ಅವರೊಂದಿಗೆ ಸದಾ ಉಳಿದುಕೊಂಡು ಬಂದಿದೆ ಎಂದು ಮೋದಿ ಹೇಳಿದರು.

ಜನಸಂಘವನ್ನು ಬಲಪಡಿಸುವಾಗ ಮತ್ತು ನಂತರ ಬಿಜೆಪಿ ಕಟ್ಟುವಾಗ ಈ ಗುಣ ಎದ್ದು ಕಾಣುತ್ತಿತ್ತು. ಅವರು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, 1989ರಲ್ಲಿ ಕಾಂಗ್ರೆಸ್‌‍ ಪಕ್ಷವು 400 ಸ್ಥಾನಗಳಿಂದ 200ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿಯಿತು. ಹಾಗೆಯೇ, 1996ರಲ್ಲಿ ಬಿಜೆಪಿ ಮೊದಲ ಬಾರಿಗೆ ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿತು, ಎಂದು ಅವರು ಹೇಳಿದರು. ಅಡ್ವಾಣಿ ಅವರು ಕಾರ್ಯಕರ್ತರ ಹಲವು ತಲೆಮಾರುಗಳನ್ನು ರೂಪಿಸಿದರು ಮತ್ತು ರಾಷ್ಟ್ರವೇ ಮೊದಲು ಎಂಬ ತತ್ವದ ಆಧಾರದ ಮೇಲೆ ಬಿಜೆಪಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು ಎಂದು ಪ್ರಧಾನ ಮಂತ್ರಿ ಹೇಳಿದರು.

ಅಡ್ವಾಣಿ ಜಿ ಅವರು ತಮಗೆ ವಹಿಸಿದ ಪ್ರತಿಯೊಂದು ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರು. ಆರ್‌ಎಸ್‌‍ಎಸ್‌‍ ಪ್ರಚಾರಕರಾಗಿ, ಅವರು ಮೊದಲು ರಾಜಸ್ಥಾನದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದರು. ಅಲ್ಲಿಂದ ಅವರು ರಾಷ್ಟ್ರ ರಾಜಧಾನಿಗೆ ತೆರಳಿ, ಅಟಲ್‌ ಜಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಪ್ರಾರಂಭಿಸಿದರು, ಎಂದು ಅವರು ತಿಳಿಸಿದರು. ಅಡ್ವಾಣಿ ಅವರು ಆಗಮಿಸಿದ ದೆಹಲಿಯು, ದೇಶ ವಿಭಜನೆಯ ಭೀಕರತೆಯಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿತ್ತು ಎಂದು ಮೋದಿ ಹೇಳಿದರು.

RELATED ARTICLES

Latest News