ಬೆಂಗಳೂರು, ನ. 8- ನಗರದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪಟಾಕಿ ಹಾಗೂ ಹೂವಿನ ಖರೀದಿ ಭರಾಟೆ ಜೋರಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ದೀಪಾವಳಿ ಆಚರಣೆ ನಡೆಯಲಿದ್ದು, ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ಪಟಾಕಿ ಮಾರಾಟ ಮಳಿಗೆಗಳಲ್ಲಿ ಜನಸಂದಣಿ ಹೆಚ್ಚಾಗಿದೆ.
ಪಟಾಕಿ ಖರೀದಿಗೆ ಮುಗಿಬಿದ್ದ ಜನರು; ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಮೈದಾನಗಳಲ್ಲಿ ಪಟಾಕಿ ಮಾರಾಟ ಜೋರಾಗಿ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಜನರು ಪಟಾಕಿ ಮಳಿಗೆಗಳಿಗೆ ಆಗಮಿಸಿ, ತಮಗೆ ಬೇಕಾದ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. 1,000ದಿಂದ 15,000 ರೂ.ಗಳವರೆಗಿನ ವಿವಿಧ ಬೆಲೆಯ ಪಟಾಕಿ ಬಾಕ್್ಸಗಳು ಮಾರಾಟಕ್ಕಿವೆ.
ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆದ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಮಾರಾಟ ಮಳಿಗೆಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಅಗ್ನಿಶಾಮಕ ಉಪಕರಣ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಬಳಿಕವೇ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.ಇನ್ನು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಟಾಕಿಗಳ ಬೆಲೆಯಲ್ಲಿ ಶೇ.15ರಷ್ಟು ಏರಿಕೆಯಾಗಿದೆ ಎನ್ನಲಾಗಿದ್ದು, ಬೆಲೆ ಹೆಚ್ಚಳದ ನಡುವೆಯೂ ಖರೀದಿ ಉತ್ಸಾಹಕ್ಕೆ ಕೊರತೆಯಾಗಿಲ್ಲ.
ಹೂವಿನ ದರವೂ ಗಗನಕ್ಕೆ:
ಪಟಾಕಿಗಳ ಜತೆಗೆ ದೀಪಾವಳಿ ಪೂಜೆಗೆ ಅಗತ್ಯವಿರುವ ಹೂವುಗಳ ಬೆಲೆಯೂ ಏರಿಕೆಯಾಗಿದೆ. ಸೇವಂತಿಗೆ, ಮಲ್ಲಿಗೆ, ಕನಕಾಂಬರ ಹಾಗೂ ಚೆಂಡು ಹೂವಿನ ದರ ದುಬಾರಿಯಾಗಿದ್ದರೂ ವ್ಯಾಪಾರ ಮಾತ್ರ ಬಿರುಸಿನಿಂದ ಸಾಗಿದೆ.ಕೆ.ಆರ್. ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಗ್ರಾಹಕರು ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.
ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹಬ್ಬದ ಸಮಯದಲ್ಲಿ ಹೂವುಗಳ ಬೆಲೆ ಪ್ರತಿ ಕೆ.ಜಿಗೆ 100ರಿಂದ 200 ರೂ.ಗಳವರೆಗೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಯಾವ ಹೂವಿಗೆ ಎಷ್ಟು ಬೆಲೆ?ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಹೂವುಗಳ ಬೆಲೆ ಈ ಕೆಳಗಿನಂತಿದೆ.
ಸೇವಂತಿಗೆ: ಕೆ.ಜಿಗೆ 250-300 ರೂ.
ಗುಲಾಬಿ: ಕೆ.ಜಿಗೆ ಸುಮಾರು 300 ರೂ.
ಮಲ್ಲಿಗೆ: ಕೆ.ಜಿಗೆ 1,500 ರೂ.
ಕನಕಾಂಬರ: ಕೆ.ಜಿಗೆ 2,000 ರೂ.
ಬಾಳೆಕಂದು: ಜೋಡಿಗೆ 100 ರಿಂದ 150 ರೂ.
ಒಟ್ಟಿನಲ್ಲಿ, ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಮತ್ತು ಹೂವಿನ ಮಾರುಕಟ್ಟೆಗಳಲ್ಲಿ ವ್ಯಾಪಾರ ಚುರುಕುಗೊಂಡಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
