ಬೆಂಗಳೂರು,ಮೇ26- ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯಲಿರುವ 7 ಸ್ಥಾನಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಜೂ.18ರಂದು ಮತದಾನ ನಡೆಯಲಿದೆ.
ವಿಧಾನಪರಿಷತ್ನ 7 ಸದಸ್ಯರ ಅಧಿಕಾರಾವಧಿ ಜೂ.30ಕ್ಕೆ ಕೊನೆಗೊಳ್ಳಲಿದ್ದು, ತೆರವಾಗಲಿರುವ ಈ ಸ್ಥಾನಕ್ಕೆ ಜೂ.18ರಂದು ಮತದಾನ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಜೂ.1ರಂದು ಅಧಿಸೂಚನೆ ಹೊರಡಲಿದ್ದು, ಜೂ.8 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜೂ.9 ನಾಮಪತ್ರಗಳ ಪರಿಶೀಲನೆ ನಡೆದು, ನಾಮಪತ್ರ ಹಿಂಪಡೆಯಲು ಜೂ.11 ಕಡೆಯ ದಿನವಾಗಿದೆ.
ಜೂ.18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ, 5 ಗಂಟೆ ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಯಾರ್ಯಾರು ನಿವೃತ್ತಿ:
ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಮೇಲನೆಯ ಒಟ್ಟು 7 ಸದಸ್ಯರ ಅವಧಿ ಜೂ.30ಕ್ಕೆ ಕೊನೆಗೊಳ್ಳಲಿದೆ. ಗೋವಿಂದರಾಜ್(ಕಾಂಗ್ರೆಸ್), ನಾಸೀರ್ ಅಹಮದ್(ಕಾಂಗ್ರೆಸ್), ಬಿ.ಕೆ.ಹರಿಪ್ರಸಾದ್(ಕಾಂಗ್ರೆಸ್), ಎಂ.ಟಿ.ಬಿ.ನಾಗರಾಜ್(ಬಿಜೆಪಿ), ಪ್ರತಾಪ್ ಸಿಂಹ ನಾಯಕ್(ಬಿಜೆಪಿ), ತಿಪ್ಪಣ್ಣಪ್ಪ (ಬಿಜೆಪಿ), ಸುನಿಲ್ ವಲ್ಯಾಪುರೆ(ಬಿಜೆಪಿ) ಅವರು ನಿವೃತ್ತಿಯಾಗಲಿದ್ದಾರೆ.
ಬಿಜೆಪಿಯಿಂದ ನಾಲ್ವರು ಹಾಗೂ ಕಾಂಗ್ರೆಸ್ನಿಂದ ಮೂವರು ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ 4 ಸ್ಥಾನ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ 3 ಸ್ಥಾನ ಲಭಿಸುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಮಾಡಿಕೊಂಡರೆ 3 ಸ್ಥಾನಗಳನ್ನು ಗೆಲ್ಲಬಹುದು.
ಮೂಲಗಳ ಪ್ರಕಾರ ಬಿಜೆಪಿಗೆ 2 ಸ್ಥಾನಗಳು ಲಭ್ಯವಾಗಲಿದ್ದು, ಉಳಿದ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಬಿಜೆಪಿ ಈ ಬಾರಿ ಹಳಬರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕುವ ನಿರೀಕ್ಷೆ ಇದೆ. ಪಕ್ಷದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಹಾಗೂ ಮುಂಬರುವ 2028ರ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡಲು ಪಕ್ಷ ಮುಂದಾಗಿದೆ.
