ಗದಗ,ಜ.19- ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಈಗಾಗಲೇ ಶಿವಲಿಂಗ ಮತ್ತು ಪಾಣಿಪೀಠದಂತಹ ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ.
ನಾಲ್ಕನೇ ದಿನದ ಶೋಧ ಕಾರ್ಯದಲ್ಲಿ ಮಣ್ಣಿನ ಪದರಗಳ ಅಡಿಯಲ್ಲಿ ವಿಶಿಷ್ಟ ಆಕೃತಿಯ ಕಲ್ಲಿನ ಆಯುಧ ದೊರೆತಿದ್ದು, ತಜ್ಞರ ಪರಿಶೀಲನೆಯ ನಂತರ ಇದು ಶಿಲಾಯುಗದ ಮಾನವರು ಬೇಟೆ ಅಥವಾ ರಕ್ಷಣಾ ಉದ್ದೇಶಕ್ಕಾಗಿ ಬಳಸುತ್ತಿದ್ದ ಕಲ್ಲಿನ ಕೊಡಲಿ ಎಂಬುದು ಸ್ಪಷ್ಟವಾಗಿದೆ.
ಶೋಧನಾ ಕಾರ್ಯದಲ್ಲಿ ಶಿಲಾಯುಗಕ್ಕೆ ಸೇರಿದ ಅತ್ಯಂತ ಪ್ರಾಚೀನ ಕಲ್ಲಿನ ಆಯುಧ ಪತ್ತೆಯಾಗಿರುವ ಬೆನ್ನಲ್ಲೇ, ಇದೀಗ ಉತ್ಖನನ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿರುವ ಕೋಟೆ ಗೋಡೆಯಲ್ಲಿ ಹುದುಗಿ ಹೋಗಿದ್ದ ಅಪಾರ ಪ್ರಮಾಣದ ಪ್ರಾಚ್ಯಾವಶೇಷಗಳು ಬೆಳಕಿಗೆ ಬಂದಿವೆ.
ಲಕ್ಕುಂಡಿಯ ಕಲಾತಕ ಶ್ರೀಮಂತಿಕೆಯನ್ನು ಸಾರುವಂತೆ ಒಂದೊಂದು ಶಿಲೆಯೂ ಸುಂದರ ಶಿಲ್ಪಕಲೆಗಳನ್ನು ಹೊತ್ತಿದ್ದು, ಇತಿಹಾಸಾಸಕ್ತರು ಹಾಗೂ ಸಂಶೋಧಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ಈ ಶಿಲೆಗಳು, ಪ್ರಾಚೀನ ದೇವಾಲಯಗಳಲ್ಲಿ ಬಳಸಲಾಗಿದ್ದ ಅಪೂರ್ವ ಕಲಾಕೃತಿಗಳನ್ನು ಪ್ರತಿಬಿಂಬಿಸುತ್ತಿವೆ ಎನ್ನಲಾಗಿದೆ.
ಈ ಅನ್ವೇಷಣೆ ರಾಜ್ಯದ ಜನರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಲೆಗಳ ಶ್ರೀಮಂತ ನಾಡು ಎಂಬ ಖ್ಯಾತಿಯನ್ನು ಲಕ್ಕುಂಡಿ ಮತ್ತೊಮೆ ಸಾಬೀತುಪಡಿಸುತ್ತಿದೆ. ಚಿನ್ನದಲ್ಲಿ ಮಾತ್ರವಲ್ಲ, ಕಲೆಗಳಲ್ಲೂ ಅಪಾರ ಶ್ರೀಮಂತಿಕೆ ಹೊಂದಿರುವ ಈ ನೆಲದ ಮಹತ್ವವನ್ನು ಈ ಶಿಲ್ಪಕಲೆಗಳು ಸಾರುತ್ತಿವೆ.
ಈ ಅಮೂಲ್ಯ ವಸ್ತು ಪತ್ತೆಯಾದ ತಕ್ಷಣ, ಉತ್ಖನನ ಮೇಲ್ವಿಚಾರಕರು ಅದನ್ನು ಸೂಕ್ಷ್ಮವಾಗಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಮುಚ್ಚಿ, ಹಾನಿಯಾಗದಂತೆ ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ಆಯುಧದ ಮೇಲೆ ಶೋಧ ದಿನಾಂಕ ಮತ್ತು ವಿವರಗಳು ಟ್ಯಾಗ್ ಮೂಲಕ ಲೇಬಲ್ ಮಾಡಲಾಗಿದ್ದು, ಭವಿಷ್ಯದಲ್ಲಿ ಅದನ್ನು ಅಧ್ಯಯನ ಮತ್ತು ಪ್ರದರ್ಶನಕ್ಕಾಗಿ ಉಪಯೋಗಿಸಲು ಸಿದ್ಧಪಡಿಸಲಾಗಿದೆ.
ಐತಿಹಾಸಿಕ ಲಕ್ಕುಂಡಿ ಗ್ರಾಮದ 16 ತಾಣಗಳನ್ನು ಈಗಾಗಲೇ ರಾಜ್ಯ ಸಂರಕ್ಷಿತ ಸಾರಕಗಳು ಎಂದು ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ಇನ್ನು 8 ದೇವಸ್ಥಾನ, ಬಾವಿಗಳನ್ನು ೆಬ್ರವರಿ ಅಂತ್ಯದೊಳಗೆ ಸಂರಕ್ಷಿತ ಸಾರಕಗಳಾಗಿ ರಾಜ್ಯ ಸರ್ಕಾರ ದಿಂದ ಘೋಷಣೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.
ಇದಲ್ಲದೇ, ಲಕ್ಕುಂಡಿಯ ಇನ್ನು 20 ದೇವಸ್ಥಾನ, ಬಾವಿಗಳನ್ನು ರಾಜ್ಯ ಸಂರಕ್ಷಿತ ಸಾರಕಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಸಂಬಂಧ ಒಂದು ತಿಂಗಳ ಒಳಗಾಗಿ ಸಮಗ್ರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಲಾಗಿದೆ. ಇದರಿಂದಾಗಿ ಲಕ್ಕುಂಡಿಯ ಒಟ್ಟು 44 ತಾಣಗಳು ಸರ್ಕಾರದ ನೇರ ಉಸ್ತುವಾರಿಗೆ ಒಳಪಡಲಿದ್ದು, ಇವುಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದರು.
ಅಲ್ಲದೇ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ, ಇದೊಂದು ವಿಶೇಷ ಪ್ರಕರಣ ಎಂದು ಭಾವಿಸಿ, ನಿಧಿಯ ಕಾಲಘಟ್ಟವನ್ನು ನಿರ್ಣಯಿಸಿ ಪ್ರೋತ್ಸಾಹ ಧನ ನೀಡಲಾಗುವುದು. ಸಿಕ್ಕಿರುವ ನಿಧಿಯ ಕಾಲಘಟ್ಟದ ನಿರ್ಧಾರಕ್ಕೆ ತಾಂತ್ರಿಕ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ. ಅದರ ಸೂಚನೆ ಮೇರೆಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
