Homeರಾಜ್ಯಅತಿಯಾದ ಕಾಂಗ್ರೆಸ್ ಹೈಕಮಾಂಡ್‌ ಹಸ್ತಕ್ಷೇಪ : ರಾಜ್ಯ ನಾಯಕರ ಅಸಮಾಧಾನ

ಅತಿಯಾದ ಕಾಂಗ್ರೆಸ್ ಹೈಕಮಾಂಡ್‌ ಹಸ್ತಕ್ಷೇಪ : ರಾಜ್ಯ ನಾಯಕರ ಅಸಮಾಧಾನ

ಬೆಂಗಳೂರು, ಆ.11- ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಸಂಬಂಧ ಪಟ್ಟಂತೆ ಹೈಕಮಾಂಡ್‌ನ ಅತಿಯಾದ ಹಸ್ತಕ್ಷೇಪ ರಾಜ್ಯ ನಾಯಕರಲ್ಲಿ ಅಸಹನೆಯ ವಾತಾವರಣ ಸೃಷ್ಟಿಸಿದೆ.ಇತ್ತೀಚಿನ ದಿನಗಳಲ್ಲಿ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಹೈಕಮಾಂಡ್‌ ಅಗತ್ಯ ಮೀರಿ ಮೂಗು ತೂರಿಸುತ್ತಿದೆ ಎಂಬ ಆರೋಪಗಳಿವೆ.

ನಾಯಕತ್ವ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ಸ್ಥಾನ ಪಲ್ಲಟ ಮಾಡಿದ ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ನಿಯೋಜಿಸಿತ್ತು.ಆ ನಂತರ ಪ್ರತಿ ವಿಚಾರದಲ್ಲೂ ಹೈಕಮಾಂಡ್‌ ಹಗ್ಗ-ಮೂಗುದಾರಗಳನ್ನು ಬಿಗಿಯಾಗಿ ಹಿಡಿದುಕೊಂಡು ಕುಳಿತಿದೆ. ರಾಜ್ಯ ಸರ್ಕಾರದಲ್ಲಿ ಪ್ರತಿ ಬೆಳವಣಿಗೆಯ ಮೇಲೂ ನಿಯಂತ್ರಣ ಸಾಧಿಸುವ ಹೈಕಮಾಂಡ್‌ನ ಪ್ರಯತ್ನದಿಂದಾಗಿ ಆಡಳಿತ ವ್ಯವಸ್ಥೆ ಹಳ್ಳ ಹಿಡಿಯುತ್ತಿದೆ.

ನೂತನ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದ ಬಳಿಕ ಸಂಪುಟ ವಿಸ್ತರಣೆಗೆ ಅವಕಾಶ ಮಾಡಿಕೊಡಲಾಯಿತು. ಪೂರ್ಣ ಪ್ರಮಾಣದ ಸಂಪುಟ ಬದಲಾಗಿ ಮತ್ತು ಒಂದು ಸ್ಥಾನವನ್ನು ಉಳಿಸಿಕೊಳ್ಳಲಾಗಿದೆ.ನೂತನವಾಗಿ ಸಂಪುಟಕ್ಕೆ ಸೇರಿದ ಸಚಿವರಿಗೆ 8 ದಿನ ಕಳೆದರೂ ಖಾತೆ ಹಂಚಿಕೆಯಾಗಿಲ್ಲ. ವಿಧಾನಮಂಡಲ ಅಧಿವೇಶನಕ್ಕೆ ಇನ್ನೂ ಒಂದು ದಿನ ಮಾತ್ರ ಇದೆ. ದೆಹಲಿಗೆ ತೆರಳಿದ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ಜೊತೆ ಸಭೆ ನಡೆಸಿ, ಖಾತೆಗಳ ಹಂಚಿಕೆ ವಿಚಾರವಾಗಿ ಮಾಹಿತಿ ನೀಡಿ ಬಂದಿದ್ದಾರೆ.

ಅದನ್ನು ಆಧರಿಸಿ ಡಿ.ಕೆ.ಶಿವಕುಮಾರ್‌ ಅವರು ಕೆಲ ಸಚಿವರುಗಳಿಗೆ ಕರೆ ಮಾಡಿ ಯಾವ ಖಾತೆ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ ಅಧಿಕೃತವಾದ ಆದೇಶ ಹೊರ ಬೀಳುವವರಿಗೂ ಯಾವುದೇ ಖಚಿತತೆ ಇರುವುದಿಲ್ಲ. ಹೀಗಾಗಿ ಖಾತೆಗಳ ಬಗ್ಗೆ ತಿಳುವಳಿಕೆ ಇದ್ದರೂ, ಸಚಿವರು ಕಾರ್ಯಭಾರ ವಹಿಸಿಕೊಳ್ಳಲಾಗುತ್ತಿಲ್ಲ. ಅನೌಪಚಾರಿತವಾಗಿ ಸಂಬಂಧಪಟ್ಟ ಖಾತೆಗಳ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೆ ವಿಧಾನಮಂಡಲದಲ್ಲಿ ಕೇಳಲಾಗುವ ಪ್ರಶ್ನೆಗಳು, ನಿಳುವಳಿ ಸೂಚನೆ, ಗಮನ ಸೆಳೆಯುವ ಸೂಚನೆ ಸೇರಿದಂತೆ ಇತರ ಪ್ರಸ್ತಾವನೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ನಿನ್ನೆ ಸಂಜೆಯೇ ಖಾತೆ ಹಂಚಿಕೆಯಾಗಬಹುದು ಎಂದು ಹೇಳಲಾಗಿತ್ತು. ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಜೆ ಒಳಗಾಗಿ ಖಾತೆ ಹಂಚಿಕೆಯಾಗಲಿದೆ ಎಂದು ನಿನ್ನೆ ಕೋಲಾರದಲ್ಲಿ ಹೇಳಿದ್ದರು. ಆದರೆ ಹೈಕಮಾಂಡ್‌ ಪಟ್ಟಿ ರವಾನಿಸದೇ ಇರುವುದರಿಂದ ಈಗಲೂ ಖಾತೆ ಹಂಚಿಕೆಯಾಗಿಲ್ಲ. ಬಹುತೇಕ ಇಂದು ಖಾತೆ ಹಂಚಿಕೆ ಪಟ್ಟಿಯನ್ನು ಹೈಕಮಾಂಡ್‌ ಮುಖ್ಯಮಂತ್ರಿಯವರಿಗೆ ಕಳುಹಿಸಲಿದೆ. ಅಲ್ಲಿಂದ ರಾಜ್ಯಭವನಕ್ಕೆ ಪಟ್ಟಿ ರವಾನೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಅಧಿವೇಶನದ ಹಿಂದಿನ ದಿನ ಸಚಿವರು ಖಾತೆಗಳ ಜವಾಬ್ದಾರಿ ವಹಿಸಿಕೊಳ್ಳುವ ಬೆಳವಣಿಗೆ ರಾಜ್ಯದಲ್ಲಿ ಹೊಸದು. ಹೈಕಮಾಂಡ್‌ ಉದ್ದೇಶ ಪೂರಕವಾಗಿಯೇ ಪ್ರತಿ ಹಂತದಲ್ಲೂ ಮೂಗು ತುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಗೆ ಅನುಮತಿ ನೀಡಲು 4 ದಿನ ಕಾಯಿಸಿ, ನಂತರ 5ನೇ ದಿನ ಪಟ್ಟಿ ರವಾನಿಸಿತ್ತು. ಸಂಪುಟ ವಿಸ್ತರಣೆಗೆ 8 ದಿನ ಕಳೆದರೂ ವಿಳಂಬ ಮಾಡುವ ಮೂಲಕ ತನ್ನ ಪಾರುಪತ್ಯವನ್ನು ಸಾಬೀತುಪಡಿಸುವ ಪ್ರಯತ್ನ ಹೈಕಮಾಂಡ್‌ ಮಾಡುವಂತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ನಾಯಕನ ಆಯ್ಕೆ ಶಾಸಕರ ಹೊಣೆಗಾರಿಕೆ. ನಂತರ ಸಂಪುಟ ವಿಸ್ತರಣೆ, ಪುನರ್‌ ರಚನೆ, ಖಾತೆ ಹಂಚಿಕೆ ಎಲ್ಲವೂ ಮುಖ್ಯಮಂತ್ರಿಯವರ ಪರಮಾಧಿಕಾರ. ಆದರೆ ಅದು ನೆಪ ಮಾತ್ರಕ್ಕೆ ಎಂಬಂತಾಗಿದೆ.

ಡಿ.ಕೆ.ಶಿವಕುಮಾರ್‌ ಅವರು ಎಲ್ಲಾ ವಿಚಾರಗಳಲ್ಲೂ ಹೈಕಮಾಂಡ್‌ ಮೇಲೆ ತೀವ್ರ ಅವಲಂಬನೆ ಹೊಂದಿರುವುದು ಕಂಡು ಬರುತ್ತಿದೆ. ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನ ಬಿಡಿಸಿಕೊಡಲಾಗಿದೆ ಎಂಬ ಮರ್ಜಿಗೆ ಸಿಲುಕಿರುವ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿಗಿರುವ ಎಲ್ಲಾ ಅಧಿಕಾರಗಳನ್ನು ಹೈಕಮಾಂಡ್‌ ಮುಂದಿಟ್ಟು, ಅಣತಿ ಪಾಲನೆಗಷ್ಟೇ ಸೀಮಿತವಾದಂತೆ ಕಂಡು ಬರುತ್ತಿದೆ. ವರಿಷ್ಠರ ವಿಪರೀತ ಹಸ್ತಕ್ಷೇಪ ರಾಜ್ಯ ಸರ್ಕಾರದ ಆಡಳಿತದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂಬ ಟೀಕೆ ಕೇಳಿ ಬರುತ್ತಿದೆ.

RELATED ARTICLES
spot_img

Latest News