ಪಾವಗಡ, ಮೇ 29 – ಗಡಿನಾಡು ಪಾವಗಡ ತಾಲೂಕಿನ ರಾಜಕೀಯ ಇತಿಹಾಸದ ಧ್ರುವತಾರೆ, ಧೀಮಂತ ಮುತ್ಸದ್ದಿ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ (78) ಅವರು ಇಂದು ವಿಧಿವಶರಾಗಿದ್ದಾರೆ.
ನಾಲ್ಕು ದಶಕಗಳ ಕಾಲ ತಾಲೂಕಿನ ಜನಮನ ಗೆದ್ದಿದ್ದ ಒಬ್ಬ ವರ್ಣರಂಜಿತ ರಾಜಕಾರಣಿಯ ಸುದೀರ್ಘ ಯಾನ ಅಂತ್ಯಗೊಂಡಂತಾಗಿದೆ. ಅವರ ಅಗಲಿಕೆಯಿಂದ ಇಡೀ ಗಡಿನಾಡಿನಲ್ಲಿ ಶೋಕದ ಅಲೆ ಎದ್ದಿದೆ.
ಮೃತರು ತಮ್ಮ ಹಿರಿಯ ಪುತ್ರರಾದ ಹೆಚ್.ವಿ. ಕುಮಾರಸ್ವಾಮಿ, ಹಾಲಿ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಹೆಚ್.ವಿ. ವೆಂಕಟೇಶ್, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಎಲ್ಲರ ಮನೆಯ ಮನಸ್ಸಿನ ದೊಡ್ಡಪ್ಪ
ನಾಲ್ಕು ದಶಕಗಳ ಕಾಲ ಪಾವಗಡದ ರಾಜಕಾರಣವನ್ನು ಮುನ್ನಡೆಸಿದ್ದ ವೆಂಕಟರಮಣಪ್ಪ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ತಾಲೂಕಿನ ಪ್ರತಿಯೊಂದು ಹಳ್ಳಿಯ ಜನರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾ, ಜನಸಾಮಾನ್ಯರ ಪ್ರೀತಿಯ ‘ಎಲ್ಲರ ಮನೆಯ ಮನಸ್ಸಿನ ದೊಡ್ಡಪ್ಪ’ ಎಂದೇ ಜನಪ್ರಿಯರಾಗಿದ್ದರು. ಹಿರಿಯ ಮುಖಂಡರಾಗಿದ್ದ ಅವರ ಸರಳತೆ, ಸದಾ ತೆರೆದಿರುತ್ತಿದ್ದ ಮನೆ ಹಾಗೂ ಜನಸ್ನೇಹಿ ನಡವಳಿಕೆ ಅವರನ್ನು ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಸಿತ್ತು.
ಗಡಿನಾಡಿನ ರಾಜಕೀಯ ಇತಿಹಾಸ ಬದಲಿಸಿದ ನಾಯಕ!
ಸಾಮಾನ್ಯವಾಗಿ ಗಡಿನಾಡಿನಂತಹ ತುದಿಯ ಕ್ಷೇತ್ರಗಳಿಂದ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರುವುದು ಮತ್ತು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವುದು ಅತ್ಯಂತ ಕಷ್ಟದ ಮಾತು. ಆದರೆ ವೆಂಕಟರಮಣಪ್ಪ ಅವರು ತಮ್ಮ ಅಪ್ರತಿಮ ಜನಪ್ರಿಯತೆ ಹಾಗೂ ರಾಜಕೀಯ ಚಾಣಾಕ್ಷತನದಿಂದ ಅಂತಹ ಅಸಾಧ್ಯವಾದ ಇತಿಹಾಸವನ್ನು ಸೃಷ್ಟಿಸಿ ತೋರಿಸಿದರು. ಪಾವಗಡ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಷ್ಟೇ ಅಲ್ಲದೆ, ಎರಡು ಬಾರಿ ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿ ಸೇವೆ ಸಲ್ಲಿಸಿದ ಅಪರೂಪದ ಗೌರವ ಇವರದ್ದಾಗಿದೆ.
2008ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಸಚಿವರಾದ ಇತಿಹಾಸ
ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ಇಡೀ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. ಅಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಮತ್ತು ರೇಷ್ಮೆ ಸಚಿವರಾಗಿ ಆಯ್ಕೆಯಾಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದರು.
2018 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು.ಬರಪೀಡಿತ ಮತ್ತು ಹಿಂದುಳಿದ ಕ್ಷೇತ್ರವಾದ ಪಾವಗಡದ ಅಭಿವೃದ್ಧಿಗೆ ವೆಂಕಟರಮಣಪ್ಪ ಅವರು ಇತಿಹಾಸದ ಪುಟಗಳಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ. ಇವರು 1989, 1999, 2008 ಹಾಗೂ 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 1994 ಮತ್ತು 2004ರ ಚುನಾವಣೆಗಳಲ್ಲಿ ಪರಾಜಯ ಅನುಭವಿಸಿದ್ದರು.
ವಯೋಸಹಜ ಕಾರಣಗಳಿಂದ 2023ರಲ್ಲಿ ವೆಂಕಟರಮಣಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರೂ, ತಾಲೂಕಿನ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳಿಗೆ ಸದಾ ಮಾರ್ಗದರ್ಶಕರಾಗಿದ್ದರು. ಇವರ ಅಗಲಿಕೆಯಿಂದ ಕ್ಷೇತ್ರದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ತಾಲೂಕಿನ ಜನತೆಗೆ ತುಂಬಲಾರದ ನಷ್ಟ ಉಂಟಾಗಿದೆ.
ವೆಂಕಟರಮಣಪ್ಪ ಅವರ ನಿಧನಕ್ಕೆ ನಾಡಿನ ಗಣ್ಯರು, ರೈತ ನಾಯಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕುಮಾರಪಟ್ಟಣದ ಗುರುಭವನ ಆಟದ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ಹನುಮಂತನ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಶಾಸಕ ಹೆಚ್.ವಿ. ವೆಂಕಟೇಶ್ ಅವರು ಈ ಸಂಜೆ ಮಾಹಿತಿ ನೀಡಿದ್ದಾರೆ.
