Homeರಾಜ್ಯರಾಜ್ಯ ಸರ್ಕಾರಿ ನೌಕರರಿಗೆ ಜಿಯೋ-ಟ್ಯಾಗ್ಡ್ ಹಾಜರಾತಿ ವ್ಯವಸ್ಥೆ ಜಾರಿ

ರಾಜ್ಯ ಸರ್ಕಾರಿ ನೌಕರರಿಗೆ ಜಿಯೋ-ಟ್ಯಾಗ್ಡ್ ಹಾಜರಾತಿ ವ್ಯವಸ್ಥೆ ಜಾರಿ

Geo-tagged attendance system implemented for state government employees

ಬೆಂಗಳೂರು, ಜೂ.12- ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ಕರ್ತವ್ಯ ಆಪ್‌ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ನೌಕರರು ಕಚೇರಿಯಲ್ಲೇ ಇದ್ದು ಹಾಜರಾತಿ ಗುರುತಿಸಬೇಕೆಂಬ ಉದ್ದೇಶದಿಂದ ಸರ್ಕಾರ ಜಿಯೋ-ಟ್ಯಾಗ್ಡ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಸರ್ಕಾರಿ ನೌಕರರು ತಾವು ಕರ್ತವ್ಯ ನಿರ್ವಹಿಸುವ ಕಚೇರಿಯ ಆವರಣದಲ್ಲಿ ಇದ್ದಾಗ ಮಾತ್ರ ಡಿಜಿಟಲ್‌ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗುತ್ತದೆ. ಜಿಯೋ-ಫೆನ್ಸಿಂಗ್‌ ತಂತ್ರಜ್ಞಾನದ ಮೂಲಕ ನೌಕರರ ನಿಖರವಾದ ಸ್ಥಳವನ್ನು ಇದು ಖಚಿತಪಡಿಸುತ್ತದೆ. ಕಚೇರಿಗೆ ತಲುಪಿದ ಮೇಲೆ ನಿಗದಿತ ಸಮಯದೊಳಗೆ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ವರದಿಗಳ ಪ್ರಕಾರ, ಕಚೇರಿಯ ಕೆಲಸದ ಸಮಯ ಪ್ರಾರಂಭವಾದ 10 ಗಂಟೆಗಳ ಬಳಿಕ ಹಾಜರಾತಿಯನ್ನು ದಾಖಲಿಸಲು ತಂತ್ರಾಂಶದಲ್ಲಿ ಅವಕಾಶವಿರುವುದಿಲ್ಲ. ಇದು ಕಚೇರಿ ಸಮಯಪಾಲನೆಯನ್ನು ಕಟ್ಟುನಿಟ್ಟಾಗಿಸುವ ಉದ್ದೇಶವನ್ನು ಹೊಂದಿದೆ.

ಈ ಡಿಜಿಟಲ್‌ ವ್ಯವಸ್ಥೆಯು ಹಾಜರಾತಿಯಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಗಟ್ಟಲು ಮತ್ತು ನೌಕರರ ಸಕಾಲಿಕ ಹಾಜರಾತಿಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರಕ್ಕೆ ನೇರ ಅವಕಾಶ ಕಲ್ಪಿಸುತ್ತದೆ. ನೌಕರರು ತಮ್ಮ ಮೊಬೈಲ್‌ ಅಪ್ಲಿಕೇಶನ್‌ ಅಥವಾ ಕಚೇರಿಯಲ್ಲಿರುವ ನಿರ್ದಿಷ್ಟ ಡಿಜಿಟಲ್‌ ಸಾಧನಗಳ ಮೂಲಕ ಲಾಗಿನ್‌ ಆಗಬೇಕಾಗುತ್ತದೆ. ಇಂಟರ್ನೆಟ್‌ ಸಂಪರ್ಕ ಮತ್ತು ಜಿಪಿಎಸ್‌‍ (ಉ) ಆನ್‌ ಆಗಿರುವುದು ಕಡ್ಡಾಯವಾಗಿರುತ್ತದೆ.

ಪ್ರಮುಖ ಪರಿಣಾಮಗಳು :
ಕಚೇರಿ ಸಮಯಪಾಲನೆ:
ತಡವಾಗಿ ಬರುವ ಮತ್ತು ಕಚೇರಿಯಿಂದ ಬೇಗ ನಿರ್ಗಮಿಸುವ ಅಭ್ಯಾಸಕ್ಕೆ ಈ ನಿಯಮ ಕಡಿವಾಣ ಹಾಕಲಿದೆ.
ಉತ್ತರದಾಯಿತ್ವ: ನೌಕರರು ತಮ್ಮ ಕರ್ತವ್ಯದ ಸ್ಥಳದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವುದರಿಂದ, ಸಾರ್ವಜನಿಕರಿಗೆ ಸೇವೆಗಳು ಸಕಾಲದಲ್ಲಿ ದೊರೆಯಲು ಸಹಕಾರಿಯಾಗುತ್ತದೆ.
ಡಿಜಿಟಲೀಕರಣ: ಕಾಗದರಹಿತ ಮತ್ತು ಡಿಜಿಟಲ್‌ ಆಡಳಿತದತ್ತ ಸರ್ಕಾರಿ ಸೇವೆಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.ಈ ನಿಯಮವು ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಸಂಸ್ಕೃತಿಯನ್ನು ಸುಧಾರಿಸಲು ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಲಾದ ಪ್ರಮುಖ ಕ್ರಮವಾಗಿ ಕಂಡುಬರುತ್ತಿದೆ.

ರಾಜ್ಯದ ಎಲ್ಲ ಇಲಾಖೆಗಳ ಮುಖ್ಯಸ್ಥರು, ಡ್ರಾಯಿಂಗ್‌ ಮತ್ತು ಡಿಸ್ಬರ್ಸಿಂಗ್‌ ಅಧಿಕಾರಿಗಳಿಗೆ ಹಣಕಾಸು ಇಲಾಖೆಯ ಮಾನವ ಸಂಪನೂಲ ನಿರ್ವಹಣಾ ವ್ಯವಸ್ಥೆ ವಿಭಾಗ ಸುತ್ತೋಲೆ ಹೊರಡಿಸಿದೆ.ಇದರಂತೆ, ಪ್ರತಿಯೊಂದು ಸರ್ಕಾರಿ ಕಚೇರಿಯ ಭೌಗೋಳಿಕ ಸ್ಥಳಾಂಕಗಳ ಪರಿಶೀಲನೆ ಮತ್ತು ದೃಢೀಕರಣ ಮಾಡಬೇಕಾಗಿದೆ.

ಹೊಸ ವ್ಯವಸ್ಥೆಯಲ್ಲಿ ನೌಕರರು ಕಚೇರಿಗೆ ಬಂದ ಬಳಿಕವೇ ಹಾಜರಾತಿ ದಾಖಲಿಸಬಹುದಾಗಿದೆ. ಜಿಯೋ-ಕೋ ಆರ್ಡಿನೇಟ್‌ ತಂತ್ರಜ್ಞಾನದ ಮೂಲಕ ನೌಕರರು ನಿಗದಿತ ಕಚೇರಿ ಸ್ಥಳದಲ್ಲಿದ್ದಾರೆಯೇ ಎಂಬುದನ್ನು ವ್ಯವಸ್ಥೆ ದೃಢಪಡಿಸಲಿದೆ. ಇದಕ್ಕಾಗಿ ರಾಜ್ಯದ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಕರ್ತವ್ಯ ಆಪ್‌ ಅನ್ನು ಎಲ್ಲಾ ಸರ್ಕಾರಿ ನೌಕರರು ಡೌನ್‌ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕಾಗಿದೆ.

ಹಣಕಾಸು ಇಲಾಖೆಯ ಮೂಲಗಳ ಪ್ರಕಾರ, ಈ ಹಿಂದೆ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಇದ್ದರೂ ಅದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ಯಂತ್ರಗಳು ದುರಸ್ತಿಯಲ್ಲಿವೆ ಎಂದು ಹೇಳಿ ಹಾಜರಾತಿ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ, ಹೊಸ ಜಿಯೋ-ಟ್ಯಾಗ್ಡ್ ವ್ಯವಸ್ಥೆಯಲ್ಲಿ ನೌಕರರು ಬೇರೆ ಸ್ಥಳದಿಂದ ಹಾಜರಾತಿ ದಾಖಲಿಸಲು ಸಾಧ್ಯವಿಲ್ಲ. ಕಚೇರಿಯಲ್ಲೇ ಹಾಜರಿದ್ದು, ನೈಜ ಸಮಯದಲ್ಲಿ ಹಾಜರಾತಿ ಗುರುತಿಸಬೇಕಾಗುತ್ತದೆ.

ಈ ವ್ಯವಸ್ಥೆಯನ್ನು ಮೊದಲಿಗೆ ಆರೋಗ್ಯ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅಲ್ಲಿ ಉತ್ತಮ ಫಲಿತಾಂಶ ಕಂಡುಬಂದ ಹಿನ್ನೆಲೆಯಲ್ಲಿ ಈಗ ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳಿಗೂ ವಿಸ್ತರಿಸಲಾಗಿದೆ.

ಮುಖ್ಯ ಕಾರ್ಯದರ್ಶಿ ಕಟ್ಟುನಿಟ್ಟಿನ ಸೂಚನೆ :
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ಕರ್ತವ್ಯ ಆಪ್‌ನಲ್ಲಿ ಹಾಜರಾತಿ ದಾಖಲಿಸಬೇಕು ಎಂದು ಸೂಚಿಸಿದ್ದಾರೆ. ಹಾಜರಾತಿ ದಾಖಲಿಸದ ನೌಕರರ ಕುರಿತು ವರದಿ ಸಲ್ಲಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಹಿರಿಯ ಅಧಿಕಾರಿಗಳ ಸಭೆಯಲ್ಲೇ ಸರ್ಕಾರಿ ನೌಕರರು ಸಮಯ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ಹೊಸ ಡಿಜಿಟಲ್‌ ಹಾಜರಾತಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ.

RELATED ARTICLES

Latest News