ಬೆಂಗಳೂರು, ಮೇ 19-ಸತತ ನಾಲ್ಕು ದಿನಗಳ ನಂತರ ಚಿನ್ನದ ದರದಲ್ಲಿ ಅಲ್ಪ ಚೇತರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಕುಸಿತ ಉಂಟಾಗಿದೆ.ಮೇ 13ರಂದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಚಿನ್ನದ ದರವು ಮೇ 14ರಂದು ಏರುಗತಿಯಲ್ಲಿ ಸಾಗಿತ್ತು. ಆದರೆ, ಮೇ 15ರಿಂದ ನಿನ್ನೆಯವರೆಗೆ ನಿರಂತರ ಇಳಿಮುಖವಾಗಿ ಸಾಗಿದ್ದ ಚಿನ್ನದ ದರವು ಇಂದು ಚೇತರಿಕೆ ಕಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷ ಚಿನ್ನ ಖರೀದಿ ಮಾಡುವುದನ್ನು ಮುಂದೂಡುವಂತೆ ಕರೆ ನೀಡಿದ ಬೆನ್ನಲೇ ಚಿನಿವಾರಪೇಟೆಯಲ್ಲಿ ತಲ್ಲಣ ಉಂಟಾಗಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ ಇಂದು 82 ರೂ. ಏರಿಕೆಯಾಗಿದ್ದು 15,704 ರೂ.ಗೆ ತಲುಪಿದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 75 ರೂ. ಹೆಚ್ಚಳವಾಗಿದ್ದು, 14,395 ರೂ.ನಷ್ಟಿದೆ. 18 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 61 ರೂ.ಏರಿಕೆಯಾಗಿ 11,778 ರೂ. ನಷ್ಟಿದೆ.
ಬೆಳ್ಳಿಯಂತೆ ಪ್ಲಾಟಿನಮ್ ದರವೂ ಇಳಿಕೆಯಾಗಿದೆ. 10 ಗ್ರಾಂಗೆ 240 ರೂ. ಕಡಿಮೆಯಾಗಿದ್ದು, 60,750 ರೂ.ಗೆ ತಲುಪಿದೆ. ಇನ್ನೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಬೆಳ್ಳಿ ದರದಲ್ಲಿ ಕುಸಿತವಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ಐದು ಸಾವಿರ ರೂ. ನಷ್ಟು ಇಳಿಕೆಯಾಗಿದೆ. ಪ್ರಸ್ತುತ 2.85ಲಕ್ಷ ರೂ.ನಷ್ಟಿದೆ.
ಮೇ 13ರಂದು ಒಂದು ಕೆ.ಜಿ.ಬೆಳ್ಳಿಗೆ 20 ಸಾವಿರ ರೂ.ನಷ್ಟು ಏರಿಕೆಯಾಗಿ ಮತ್ತೆ ನಾಗಾಲೋಟದಲ್ಲಿ ಏರಿಕೆಯಾಗುವ ಆತಂಕ ಮೂಡಿಸಿತ್ತು. 3.10 ಲಕ್ಷ ರೂ.ಗೆ ತಲುಪಿತ್ತು. ಆದರೆ, ಮೇ 14ರಿಂದ 16ರವರೆಗೆ ಮೂರು ದಿನಗಳ ಕಾಲ ನಿತ್ಯ 10 ಸಾವಿರ ರೂ. ಇಳಿಕೆಯಾಗಿತ್ತು. ಮೇ 17ರಂದು ಸ್ಥಿರವಾಗಿದ್ದ ಬೆಳ್ಳಿ ದರವು ನಿನ್ನೆ ಒಂದು ಕೆ.ಜಿ.ಗೆ 10 ಸಾವಿರ ರೂ. ಏರಿಕೆಯಾಗಿತ್ತು.
ಜಾಗತಿಕವಾಗಿ ಆಗಾಗ್ಗೆ ನಡೆಯುವ ವಿದ್ಯಮಾನಗಳು ಹಾಗೂ ದೇಶೀಯವಾಗಿ ಸರ್ಕಾರಗಳು ಕೈಗೊಳ್ಳುವ ನಿರ್ಧಾರಗಳಿಂದಾಗಿ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಏರಿಳಿತವಾಗಲಿವೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
