ಬೆಂಗಳೂರು,ಮೇ 19- ರಾಜ್ಯಸರ್ಕಾರ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆಯುತ್ತಿರುವುದು ಸಾಧನಾ ಸಮಾವೇಶ ಅಲ್ಲ ಬದಲಿಗೆ ಸತ್ತ ಸರ್ಕಾರದ ಸಮಾರಾಧನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ನಡೆಸಿದ್ದಾರೆ. ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಈ ಸಮಾವೇಶ ಮಾಡುತ್ತಿದ್ದಾರೆ.
ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ಮಾತ್ರ ಇವರ ಸಾಧನೆ. ರಾಜ್ಯ ತೆರಿಗೆದಾರರ ಹಣವನ್ನು ಹಾಳು ಮಾಡಲಾಗುತ್ತಿದೆ. ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡಬೇಕೆಂದು ಪ್ರಶ್ನಿಸಿದರು. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜನರನ್ನು ಬಲವಂತವಾಗಿ ಬಸ್‌ಗಳಲ್ಲಿ ಕರೆದೊಯ್ದಿದ್ದಾರೆ. ಸಮಾವೇಶ ಮಾಡುವಂಥ ಘನ ಕೆಲಸ ಸರ್ಕಾರ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ತುಮಕೂರಿನಲ್ಲಿ ಸಾಧನಾ ಸಮಾವೇಶ ಹಮಿಕೊಂಡಿದ್ದಾರೆ. ಅವರ ಜಾಹೀರಾತಿನ ಭಾಷೆಯಲ್ಲಿ ಹೇಳುವುದಾದರೆ, ಗ್ಯಾರಂಟಿ ಹಬ್ಬ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ, ಸಮರ್ಪಣೆ, ಸಂಕಲ್ಪ, ಮತ್ತಷ್ಟು ಜನಪರ ಸೇವೆಯೆ ಪ್ರತಿಜ್ಞೆ ಎಂದು ಜಾಹೀರಾತು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರಿಗೆ ಕೇಳ ಬಯಸುತ್ತೇನೆ. ಯಾವ ಪುರುಷಾರ್ಥಕ್ಕೆ ಈ ಸಾಧನಾ ಸಮಾವೇಶ ನಡೆಸುತ್ತಿದ್ದೀರಿ?, ಕಳೆದ ಮೂರು ವರ್ಷಗಳಲ್ಲಿ ತಾವು ಮಾಡಿದ ಸಾಧನೆ ಏನು?, ಅಭಿವೃದ್ಧಿ ಕೆಲಸ ಏನು ಮಾಡಿದ್ದೀರಿ? ಹೊಸ ಯೋಜನೆ ಎಷ್ಟು ಕೊಟ್ಟಿದ್ದೀರಿ?, ರೈತರ ನೆರವಿಗೆ ನಿಮ ಸರ್ಕಾರ ಬಂದಿದೆಯಾ?, ಯಾವುದನ್ನೂ ಮಾಡದೇ ಗ್ಯಾರಂಟಿ ನೆಪ ಒಡ್ಡಿ, ಸರ್ಕಾರ ಬದುಕಿದೆ ಅಂತಷ್ಟೇ ಈ ಸಮಾವೇಶ ಮೂಲಕ ಮಾಡುತ್ತಿದ್ದೀರಿ ಎಂದು ಕುಹಕವಾಡಿದರು.
ಅತೀ ಹೆಚ್ಚು ಬಜೆಟ್ ಮಂಡನೆ, ಸುದೀರ್ಘ ಸಿಎಂ ಹೆಸರಿಗೆ ಮಾತ್ರ. ಅಹಿಂದ ದುರ್ಬಳಕೆ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದ್ದಾರೆ. ಅವರ ಮೂರು ವರ್ಷದ ಆಡಳಿತ, ಮನೆಗೆ ಮಗ ಆಗಲಿಲ್ಲ, ಊರಿಗೆ ಉಪಕಾರಿ ಆಗಲಿಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿಯಾಗಿದೆ. ಸಾಲದ ಶೂಲಕ್ಕೆ ನೂಕಿ ರಾಜ್ಯದಲ್ಲಿ ಅರಾಜಕತ ಸೃಷ್ಟಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳಿಗೆ ಅಪಮಾನ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮುಂದುವರೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಸಹಿಸದೇ ಕೇಂದ್ರದ ನೀತಿಗಳನ್ನು ವಿರೋಧಿಸುತ್ತಿದ್ದಾರೆ. ಸರ್ಕಾರದ ಆಡಳಿತಕ್ಕೆ ಜನ ಬೇಸತ್ತಿದ್ದು, ರಾಜ್ಯದಲ್ಲಿ ಯಾವತ್ತೇ ಚುನಾವಣೆ ನಡೆದರೂ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಈ ಸರ್ಕಾರಕ್ಕೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲು ಆಗುತ್ತಿಲ್ಲ. ಲಜ್ಜೆಗೆಟ್ಟ ಸರ್ಕಾರ, ಕೆಪಿಎಸ್‌ಸಿ ನಿರುದ್ಯೋಗಿಗಳಿಗೆ ಆಸರೆಯಾಗಿಲ್ಲ. ಕಾಂಗ್ರೆಸ್ ನಾಯಕರ ಅಹಿಂದ ಮುಖವಾಡ ಕಳಚಿ ಬಿದ್ದಿದೆ. ಸರ್ಕಾರ ಮೀಸಲಾತಿ, ಒಳಮೀಸಲಾತಿ ವಿಚಾರದಲ್ಲಿ ಗೊಂದಲ ಹುಟ್ಟಿಸಿದ್ದಾರೆ ಎಂದು ಆರೋಪಿಸಿದರು.
ಎಸ್ಸಿ, ಎಸ್ಟಿ, ಅಲೆಮಾರಿ ಸಮಯದಾಯಗಳಿಗೆ ನ್ಯಾಯ ಕೊಡುವ ಕೆಲಸ ಬಿಜೆಪಿ ಮಾಡಿತ್ತು. ಎಲ್ಲವನ್ನೂ ಗಾಳಿಗೆ ತೂರಿ, ಸುಪ್ರೀಂಕೋರ್ಟ್ ಆದೇಶ ಇದ್ದರೂ ಲಕ್ಷಾಂತರ ಯುವಕರ ಜೀವನದ ಜತೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇವೆ ಎಂದಿದ್ದರು.
ವಾಲೀಕಿ ನಿಯಮದ ಹಗರಣ ಆದಾಗಲೇ ಸಿಎಂ ರಾಜೀನಾಮೆ ಕೊಡಬೇಕಿತ್ತು ಎಂದು ಹೇಳಿದರು. ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಮಾಡಿಕೊಂಡಿಲ್ಲ. 6.5 ಸಾವಿರ ಗ್ರಂಥಾಲಯಗಳು ಬಾಗಿಲು ಮುಚ್ಚಿವೆ. ಎನ್‌ಇಪಿಯನ್ನೂ ಜಾರಿ ಮಾಡಲಿಲ್ಲ. ಇಂಥಹ ಶಿಕ್ಷಣ ಸಚಿವರು ರಾಜ್ಯಕ್ಕೆ ಸಿಕ್ಕಿರುವುದು ಇದೇ ಮೊದಲು. ಶಿಕ್ಷಣ ಕ್ಷೇತ್ರದಲ್ಲಿ ಇವರು ಗೊಂದಲ ಮೂಡಿಸಿದ್ದಾರೆ ಎಂದು ದೂರಿದರು.ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ಭೂಪೇಂದ್ರ ಯಾದವ್ ಮತ್ತು ತರುಣ್ ಚುಗ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ನಮದು ರಾಷ್ಟ್ರೀಯ ಪಕ್ಷ. ನಮಲ್ಲಿ ತಳಹಂತದಿಂದಲೂ ಸಂಘಟನಾತಕ ಪ್ರಕ್ರಿಯೆಗಳು ನಡೆಯುತ್ತವೆ ಎಂದರು.
ರಾಜ್ಯಾಧ್ಯಕ್ಷರ ವಿಚಾರದಲ್ಲಿ ಅವರು ಏನು ಚರ್ಚೆ ಮಾಡಬೇಕೋ ಮಾಡುತ್ತಾರೆ. ನಂತರ ರಾಷ್ಟ್ರೀಯ ನಾಯಕರು ಯಾವ ಸಂದರ್ಭದಲ್ಲಿ ಏನು ನಿರ್ಧಾರ ಮಾಡಬೇಕೋ ಮಾಡುತ್ತಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.
ಇದೇ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಗಳ ಜನವಿರೋಧಿ ಆಡಳಿತಕ್ಕೆ ಮೂರು ವರ್ಷ ಖಜಾನೆ ಖಾಲಿ ಮಾಡಿದ ಭ್ರಷ್ಟ ಸರ್ಕಾರ ಎಂಬ ಪೋಸ್ಟರ್ ಅನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ , ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಭೈರತಿ ಬಸವರಾಜು ಸೇರಿದಂತೆ ಮತ್ತಿತರರು ಬಿಡುಗಡೆ ಮಾಡಿದರು.
