ಬೆಂಗಳೂರು,ಆ.20- ವರಮಹಾಲಕ್ಷ್ಮಿ ಮುನ್ನಾ ದಿನವಾದ ಇಂದು ಚಿನ್ನ, ಬೆಳ್ಳಿ ದರಗಳಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ನಿನ್ನೆಯಷ್ಟೇ ಕುಸಿತ ಕಂಡಿದ್ದ ಚಿನ್ನ, ಬೆಳ್ಳಿ ದರಗಳು ದಿಢೀರ್ ಏರಿಕೆ ಕಂಡಿದ್ದು, ಗ್ರಾಹಕರಲ್ಲಿ ಆತಂಕವನ್ನು ಉಂಟು ಮಾಡಿವೆ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಆಭರಣಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಸಂಪ್ರದಾಯವಿದೆ. ಹೀಗಾಗಿ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ ಗ್ರಾಹಕರನ್ನು ತಟ್ಟತೊಡಗಿದೆ.
ಕಳೆದ 5 ದಿನಗಳಿಂದ ನಿರಂತರ ಏರಿಕೆ ಕಂಡಿದ್ದ 24 ಕ್ಯಾರೆಟ್ನ ಒಂದು ಗ್ರಾಂ ಚಿನ್ನ 92 ರೂ. ಹಾಗೂ 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನ 85 ರೂ.ನಷ್ಟು ನಿನ್ನೆ ಕಡಿಮೆಯಾಗಿತ್ತು. ಆದರೆ ಇಂದು 24 ಕ್ಯಾರೆಟ್ನ ಒಂದು ಗ್ರಾಂ ಚಿನ್ನ 430 ರೂ.ನಷ್ಟು ಏರಿಕೆಯಾಗಿದ್ದು, 15,927 ರೂ.ಗೆ ತಲುಪಿದೆ.
22 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 395 ರೂ.ನಷ್ಟು ಹೆಚ್ಚಾಗಿದ್ದು, 14,600 ರೂ. ನಷ್ಟಿದೆ. 18 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 323 ರೂ. ಹೆಚ್ಚಳವಾಗಿದ್ದು, 11,946 ರೂ.ನಷ್ಟಿದೆ.
ಜುಲೈನಲ್ಲಿ ಇಳಿಮುಖವಾಗಿದ್ದ ಚಿನ್ನದ ದರವು ಆಗಸ್ಟ್ನಲ್ಲಿ ಏರುಗತಿಯಲ್ಲೇ ಸಾಗುತ್ತಿದೆ. ಆಗೊಮೆ, ಈಗೊಮೆ ಅಲ್ಪಪ್ರಮಾಣದಲ್ಲಿ ಇಳಿಕೆಯಾದರೂ ಮತ್ತೆ ಚೇತರಿಕೆ ಕಂಡು ದುಬಾರಿ ದರದತ್ತ ಸಾಗುತ್ತಿದೆ.
ಆ.12 ರಿಂದ ಸ್ಥಿರವಾಗಿದ್ದ ಬೆಳ್ಳಿಯು ಆ.14 ರಂದು ಒಂದು ಕೆಜಿಗೆ 5 ಸಾವಿರ ರೂ. ಇಳಿಕೆಯಾಗಿದ್ದು, ನಂತರ ಆ.18 ರವರೆಗೂ ಅದೇ ದರ ಮುಂದುವರೆದಿತ್ತು.ನಿನ್ನೆ ಮತ್ತೆ 5 ಸಾವಿರ ಇಳಿಕೆಯಾಗಿ ಒಂದು ಕೆಜಿಗೆ 2,45,000 ರೂ.ನಷ್ಟಿದ್ದ ಬೆಳ್ಳಿಯ ದರ ಇಂದು ಮತ್ತೆ 10 ಸಾವಿರ ರೂ. ಹೆಚ್ಚಳ ಕಂಡಿದ್ದು, 2.55 ಲಕ್ಷಕ್ಕೆ ಏರಿಕೆಯಾಗಿ ಗ್ರಾಹಕರು ಹುಬ್ಬೇರಿಸುವಂತೆಯಾಗಿದೆ.
