Homeರಾಜ್ಯಔಷಧ ಮಳಿಗೆಗಳ ಮೇಲೆ ತೀವ್ರ ನಿಗಾ ವಹಿಸಲು ರಾಜ್ಯ ಸರ್ಕಾರ ಖಡಕ್‌ ಆದೇಶ

ಔಷಧ ಮಳಿಗೆಗಳ ಮೇಲೆ ತೀವ್ರ ನಿಗಾ ವಹಿಸಲು ರಾಜ್ಯ ಸರ್ಕಾರ ಖಡಕ್‌ ಆದೇಶ

State government orders strict vigilance on drug stores

ಬೆಂಗಳೂರು,ಆ.20- ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದ ಸುಮಾರು 6 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಬೃಹತ್‌ ನಕಲಿ ಔಷಧಿ ಜಾಲವನ್ನು ರಾಮನಗರ ಜಿಲ್ಲೆಯ ಬಿಡದಿ ಬಳಿ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಭೇದಿಸಿದ್ದಾರೆ.

ಈ ಆಘಾತಕಾರಿ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ರಾಜ್ಯಾದ್ಯಂತ ಎಲ್ಲಾ ಮೆಡಿಕಲ್‌ ಸ್ಟೋರ್‌ಗಳು ಮತ್ತು ಔಷಧಿ ವಿತರಣಾ ಜಾಲಗಳ ಮೇಲೆ ತೀವ್ರ ನಿಗಾ ವಹಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹಿಂದಿನ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಔಷಧ ನಿಯಂತ್ರಕರ ನೇತತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಲು ಸೂಚಿಸಿದೆ.

ರಾಜ್ಯದ ಎಲ್ಲಾ ಔಷಧ ಮಳಿಗೆಗಳು, ಗೋಡೌನ್‌ಗಳು ಹಾಗೂ ಸಗಟು ವಿತರಕರ ಕೇಂದ್ರಗಳಲ್ಲಿ ತುರ್ತು ತಪಾಸಣೆ ನಡೆಸಲು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ವಿಭಾಗದಿಂದ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಲಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ :
ಗ್ರಾಹಕರು ಯಾವುದೇ ಔಷಧಿಗಳನ್ನು ಖರೀದಿಸುವಾಗ ಅನುಮಾನ ಬಂದಲ್ಲಿ ಅಥವಾ ನಕಲಿ ಲೇಬಲ್‌ಗಳು ಕಂಡುಬಂದಲ್ಲಿ ತಕ್ಷಣವೇ ಇಲಾಖೆಯ ಗಮನಕ್ಕೆ ತರಲು ಕ್ಯೂಆರ್‌ ಕೋಡ್‌ ಆಧಾರಿತ ದೂರು ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಯಾವುದೇ ಮೂಲೆಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದರೂ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಈ ನಕಲಿ ಔಷಧಿ ಜಾಲದ ಮೂಲ ಬೇರುಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಮತ್ತು ಸರಬರಾಜು ಸರಪಳಿಯನ್ನು ಬುಡಸಹಿತ ಕತ್ತರಿಸಲು ಸರ್ಕಾರ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ತಪಾಸಣೆ ಮತ್ತಷ್ಟು ತೀವ್ರಗೊಳ್ಳಲಿದೆ. ರಾಮನಗರ ಜಿಲ್ಲೆಯ ಬಿಡದಿ ಸಮೀಪದ ತಾವರೆಕೆರೆ ವ್ಯಾಪ್ತಿಯ ಫಾರ್ಮ್‌ಹೌಸ್‌‍ನಲ್ಲಿ ಯಾವುದೇ ಅಧಿಕತ ಪರವಾನಗಿ ಇಲ್ಲದೆ, ಅಕ್ರಮವಾಗಿ ಔಷಧಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳ ನಕಲಿ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ.

ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಗೆ (ಸುಮಾರು 600 ರೂ.) ಔಷಧಿಗಳನ್ನು ತರಿಸಿ, ಪ್ರತಿಷ್ಠಿತ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಅಂಟಿಸಿ ಅವುಗಳನ್ನು 6,000 ರೂ.ಗಳವರೆಗೆ ಮೌಲ್ಯವಿರುವ ದುಬಾರಿ ಔಷಧಿಗಳೆಂದು ಬಿಂಬಿಸಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು.

ಪ್ರಾಥಮಿಕ ತನಿಖೆಯಲ್ಲಿ ಈ ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳು ಕೇವಲ ಸಾಮಾನ್ಯ ಮಾರುಕಟ್ಟೆಯಷ್ಟೇ ಅಲ್ಲದೆ, ಪ್ರಮುಖ ಆಸ್ಪತ್ರೆಗಳ ಐಸಿಯು ಘಟಕಗಳಲ್ಲಿರುವ ಗಂಭೀರ ರೋಗಿಗಳಿಗೂ ಪೂರೈಕೆಯಾಗುತ್ತಿತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಂದಿದೆ.

ಈ ದಂಧೆಯ ಪ್ರಮುಖ ಸೂತ್ರಧಾರಿಗಳಾದ ಪ್ರಶಾಂತ್‌‍, ಔಷಧಿ ವಿತರಕ ವೆಂಕಟೇಶ್‌ ಹಾಗೂ ಫಾರ್ಮ್‌ಹೌಸ್‌‍ ವ್ಯವಸ್ಥಾಪಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿದಿದೆ. ದಾಳಿ ವೇಳೆ ಸುಮಾರು 5 ರಿಂದ 6 ಕೋಟಿ ರೂ. ಮೌಲ್ಯದ ನಕಲಿ ಔಷಧಿಗಳು, ಖಾಲಿ ಬಾಟಲಿಗಳು ಮತ್ತು ಮುದ್ರಣ ಸಾಮಾಗ್ರಿಗಳು ಜಪ್ತಿಗೊಂಡಿವೆ.

RELATED ARTICLES
spot_img

Latest News