ಹಾಸನ,ನ.7- ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕ ದರ್ಶನದ 9ನೇ ದಿನವಾದ ನಿನ್ನೆಯವರೆಗೂ ಸುಮಾರು 18 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.ಇಂದೂ ಕೂಡಾ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ದರ್ಶನ ವಿಳಂಬವಾದರೂ ತಾಳೆಯಿಂದ ದರ್ಶನ ಪಡೆಯುತ್ತಿದ್ದಾರೆ.
1000 ರೂ. ಹಾಗೂ 300 ರೂ. ವಿಶೇಷ ದರ್ಶನದ ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟದಿಂದ 17 ಕೋಟಿ ರೂ. ಆದಾಯ ಸಂಗ್ರಹವಾಗಿದೆ.ಧರ್ಮದರ್ಶನದ ಸರತಿ ಸಾಲುಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದು, ಸುಗಮ ದರ್ಶನಕ್ಕಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸ್ವಯಂ ಸೇವಕರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಎಲ್ಲರಿಗೂ ಸಹ ದರ್ಶನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ವಾರಾಂತ್ಯದ ರಜೆ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.ರಾಜ್ಯದ ವಿವಿಧ ಮೂಲೆಗಳಿಂದ ತಂಡೋಪತಂಡವಾಗಿ ಭಕ್ತರು ಆಗಮಿಸುತ್ತಿದ್ದು, ವರ್ಷಕ್ಕೊಮೆ ದರ್ಶನ ನೀಡುವ ಶಕ್ತಿ ದೇವತೆಯನ್ನು ಕಣ್ತುಂಬಿಕೊಂಡು ಪುನೀತರಾಗುತ್ತಿದ್ದಾರೆ.
