ಬೆಂಗಳೂರು,ಆ.16-ನಗರದ ಹೊರವಲಯದಲ್ಲಿರುವ ನೈಸ್ ರಸ್ತೆಯಲ್ಲಿ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರಿಗೆ 7 ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು ನೈಸ್ ಸಂಸ್ಥೆ ಬಿಎಂಐಸಿಪಿ ಯೋಜನೆಯನ್ನು ಮೂಲ ಒಪ್ಪಂದದಲ್ಲಿ (ಎಫ್ಡಬ್ಲ್ಯೂಎ ಮತ್ತು ಪಿಟಿಎ) ಅಡಕವಾಗಿರುವ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಬಿಎಂಐಸಿಪಿ ಯೋಜನೆಯನ್ನು ರಾಜ್ಯಸರ್ಕಾರ ಶಾಸನವೊಂದನ್ನು ರಚಿಸುವ ಮೂಲಕ ವಶಪಡಿಸಿಕೊಳ್ಳಬೇಕು. ರಾಜ್ಯದ ಜನತೆಯ ಹಿತಾಸಕ್ತಿಯ ದೃಷ್ಟಿಯಲ್ಲಿ ರಾಜ್ಯಸರ್ಕಾರ ಈ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾವಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳ ತೀರ್ಪುಗಳಲ್ಲಿ ನೀಡಿರುವ ನಿರ್ದೇಶನಗಳಂತೆ ರಾಜ್ಯ ವಿಧಾನಸಭೆಯ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪಸಮಿತಿ ಶಿಫಾರಸ್ಸುಗಳಲ್ಲಿ ದಾಖಲಿಸುವಂತೆ ನೈಸ್ ಸಂಸ್ಥೆ ಬಿಎಂಐಸಿಪಿ ಯೋಜನೆ ಅನುಷ್ಠಾನದಲ್ಲಿ ಮೂಲ ಒಪ್ಪಂದದ ನಿಬಂಧನೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
ಬಿಎಂಐಸಿಪಿ ಯೋಜನೆಗೆ ಭೂಸ್ವಾಧೀನಪಡಿಸಿಕೊಂಡು 23 ವರ್ಷಗಳು ಕಳೆದಿದ್ದರೂ ಭೂಮಿ ಕಳೆದುಕೊಂಡ ರೈತರಿಗೆ ಮತ್ತು ಭೂ ಮಾಲೀಕರಿಗೆ ಭೂ ಪರಿಹಾರ ನೀಡದೇ ಇರುವುದರಿಂದ ಅವರು ಬೀದಿಪಾಲಾಗಿದ್ದಾರೆ. ನೈಸ್ ಸಂಸ್ಥೆ ಮತ್ತು ವ್ಯಾಜ್ಯಗಾರರು ಪದೇಪದೇ ನ್ಯಾಯಾಲಯಗಳ ಮೊರೆ ಹೋದ ಹಿನ್ನೆಲೆಯಲ್ಲಿ ನೈಸ್ ಸಂಸ್ಥೆ 30 ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಬೆಂಗಳೂರು-ಮೈಸೂರು ಇನ್ಫಾಸ್ಟ್ರೆಕ್ಚರ್ ಯೋಜನೆಯ ಸೆಕ್ಷನ್ ಎ ಅನ್ನು 2012 ರೊಳಗೆ, ಸೆಕ್ಷನ್ ಬಿ ಅನ್ನು 2014ರೊಳಗೆ ಪೂರ್ಣಗೊಳಿಸಬೇಕಿತ್ತು. ಆದರೆ ಈಗ ಸೆಕ್ಷನ್ ಎ ಭಾಗದ ರ್ತೆಯನ್ನು ಮಾತ್ರ ನಿರ್ಮಾಣ ಮಾಡುತ್ತಿದೆ. ಅಲ್ಲದೆ ನಗರ ಸಮುಚ್ಛಯಗಳನ್ನು 12 ವರ್ಷಗಳಲ್ಲಿ ಪೂರ್ಣಗೊಳಿಸಲು ಅವಕಾಶ ನೀಡಿದ್ದು, ಅದನ್ನೂ ಕೂಡಾ ಪೂರ್ಣಗೊಳಿಸಿಲ್ಲ. ಹೀಗಾಗಿ ಮೂಲ ಒಪ್ಪಂದಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹೈಕೋರ್ಟ್ನ ವಿಭಾಗೀಯ ಪೀಠವು ಜುಲೈ 29 ರಂದು ನೀಡಿರುವ ತೀರ್ಪಿನಲ್ಲಿ ಈ ಯೋಜನೆಯನ್ನು ರದ್ದುಪಡಿಸಲು ಸೂಚಿಸಿದೆ. ಅಲ್ಲದೆ ಸಚಿವ ಸಂಪುಟ ಉಪಸಮಿತಿ ನೈಸ್ ಸಂಸ್ಥೆಗೆ ನೀಡಿರುವ ಜಮೀನು ವಾಪಸ್ಸು ಪಡೆಯಬೇಕು, ಅನಧಿಕೃತ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು, ಮೂಲ ಒಪ್ಪಂದಗಳಿಂದ ಹೊರಗುಳಿದಿರುವ ಜಮೀನುಗಳನ್ನು ಅಧಿಸೂಚನೆಯಿಂದ ಕೈಬಿಡಬೇಕು. ಬೇರೆ ಉದ್ದೇಶಕ್ಕೆ ಬಳಸಿರುವ ಭೂಮಿಯನ್ನು ನೈಸ್ ಸಂಸ್ಥೆಯಿಂದ ವಾಪಸ್ಸು ಪಡೆಯಬೇಕು. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಉಪಸಮಿತಿ ತೀರ್ಮಾನ ಮಾಡಿತ್ತು.
ಹೆಚ್ಚುವರಿಯಾಗಿ ನೀಡಲಾಗಿರುವ 554 ಎಕರೆ ಭೂಮಿಯನ್ನು ನೈಸ್ ಸಂಸ್ಥೆಯಿಂದ ಹಿಂದಕ್ಕೆ ಪಡೆಯಲು ಸರ್ಕಾರ ಕ್ರಮ ವಹಿಸಿಲ್ಲ. ಕೆರೆಕಟ್ಟೆ ಮತ್ತು ಹಳ್ಳಕೊಳ್ಳಗಳನ್ನು ನೈಸ್ ಸಂಸ್ಥೆಗೆ ಹಸ್ತಾಂತರಿಸಿದ್ದು, ಮೂಲ ಸೌಕರ್ಯಕ್ಕೆ ಧಕ್ಕೆಯಾಗಿರುವ ಬಗ್ಗೆ ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.
ನೈಸ್ ಸಂಸ್ಥೆಗೆ ನೀಡಿರುವ ಹಲವು ಎಕರೆ ಭೂಮಿಯನ್ನು ವಾಣಿಜ್ಯ ಉಪಯೋಗಕ್ಕೆ ಬಳಸಿ ಲಾಭ ಮಾಡಿಕೊಂಡಿರುವುದು ಮೂಲ ಒಪ್ಪಂದದ ವಿರುದ್ಧವಾಗಿದೆ ಎಂದು ಹೈಕೋರ್ಟ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಜಮೀನು ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರ ಮತ್ತು ನಿವೇಶನವನ್ನು ಇದುವರೆಗೂ ನೀಡಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಜುಂ ಫರ್ವೇಜ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ 111 ಕಿ.ಮೀ. ಉದ್ದ ಎಕ್ಸ್ ಪ್ರೆಸ್ ರಸ್ತೆ ಪೈಕಿ ಕೇವಲ 5 ಕಿ.ಮೀ. ಮಾತ್ರ ನಿರ್ಮಾಣ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ.
ಸುಮಾರಿ 20 ಸಾವಿರ ಎಕರೆ ಭೂಮಿಯನ್ನು ನೈಸ್ ಸಂಸ್ಥೆಗೆ ನೀಡಲಾಗಿದ್ದು, ಇದೊಂದು ದೊಡ್ಡ ಹಗರಣ ಎಂದು ಕೋರ್ಟ್ ಉಲ್ಲೇಖಿಸಿದ್ದು, ಹೈಕೋರ್ಟ್ನ ತೀರ್ಪು ಹಾಗೂ 2016ರಲ್ಲಿ ಆಗಿನ ಕಾನೂನು ಇವರಾಗಿದ್ದ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯ ಸದನ ಸಮತಿ ನೀಡಿರುವ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ತಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
