Homeರಾಜ್ಯರೆಡ್ಡಿ ಮನವೊಲಿಕೆಗೆ ಖುದ್ದು ಅಖಾಡಕ್ಕಿಳಿದ ಹೈಕಮಾಂಡ್‌

ರೆಡ್ಡಿ ಮನವೊಲಿಕೆಗೆ ಖುದ್ದು ಅಖಾಡಕ್ಕಿಳಿದ ಹೈಕಮಾಂಡ್‌

High command personally enters to convince Ramalinga Reddy

ಬೆಂಗಳೂರು, ಜೂ. 6- ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿರುವ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಕಾಂಗ್ರೆಸ್‌‍ ಹೈಕಮಾಂಡ್‌ ಖುದ್ದು ಅಖಾಡಕ್ಕಿಳಿದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೆಂಗಳೂರಿನ ಸೌಥ್‌ ಎಂಡ್‌ ಸರ್ಕಲ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಡ ರಾತ್ರಿ 1 ಗಂಟೆಯವರೆಗೂ ರಾಮಲಿಂಗಾರೆಡ್ಡಿಯವರ ಮನವೊಲಿಸುವ ಪ್ರಯತ್ನ ನಡೆಸಿದರು.

ಇಂದು ಬೆಳಗ್ಗೆ ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಖಾಸಗಿ ಹೋಟೆಲ್‌ನಲ್ಲಿ ರಾಮಲಿಂಗಾರೆಡ್ಡಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆಯಿಂದ ಮಧ್ಯರಾತಿ 1 ಗಂಟೆಯವರೆಗೂ ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಎಮ್‌.ರೇವಣ್ಣ ಅವರು ಜೊತೆಯಾಗಿ ರಾಮಲಿಂಗಾರೆಡ್ಡಿಯವರ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದ ಹೊರತು ಬೇರೆ ಯಾವುದೇ ಮಾತುಕತೆಗಳು ಪ್ರಯೋಜನವಿಲ್ಲ ಎಂದು ರಾಮಲಿಂಗಾರೆಡ್ಡಿ ಪುನರುಚ್ಚರಿಸಿದ್ದಾರೆ ಎಂದು ಹೇಳಲಾಗಿತ್ತು.
ಖಾತೆ ಹಂಚಿಕೆ ಹೈಕಮಾಂಡ್‌ನ ನಿರ್ಧಾರ. ತಮಗೂ, ಇದಕ್ಕೂ ಸಂಬಧವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಆದರೆ ಇದನ್ನು ರಾಮಲಿಂಗಾರೆಡ್ಡಿಯವರು ಒಪ್ಪಿಲ್ಲ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ರಾಮಲಿಂಗಾರೆಡ್ಡಿ, ಎಚ್‌.ಎಂ.ರೇವಣ್ಣ ಮತ್ತು ತಾವು 1980ರಿಂದಲೂ ಸ್ನೇಹಿತರು. ಒಂದೇ ಪಕ್ಷದಲ್ಲೇ ಇದ್ದೇವೆ. ನಾನು ಅಧ್ಯಕ್ಷ, ರಾಮಲಿಂಗಾರೆಡ್ಡಿ ಕಾರ್ಯಾಧ್ಯಕ್ಷರು. ನಾನು ಮುಖ್ಯಮಂತ್ರಿ, ಅವರು ಸಚಿವರು. ನಾವು ಪಕ್ಷ ಉಳಿಸಲು ಮತ್ತು ಬೆಂಗಳೂರಿಗೆ ಒಳ್ಳೆಯದಾಗಬೇಕೆಂದು ಬಯಸುವವರು. ಇದು ಕುಟುಂಬದ ಸಮಸ್ಯೆ. ಬಗೆ ಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ರಾಮಲಿಂಗಾರೆಡ್ಡಿ ಮಿಸ್‌‍ ಕಮ್ಯೂನಿಕೇಷನ್‌ ಅಗಿದೆ ಎಂದರು. ಅದನ್ನೇ ಪುನರುಚ್ಚರಿಸಿದ ಡಿ.ಕೆ.ಶಿವಕುಮಾರ್‌, ರಾಮಲಿಂಗಾರೆಡ್ಡಿಯವರು ಪಕ್ಷ ಬಿಟ್ಟುಹೋಗುತ್ತೇನೆ ಎಂದು ಹೇಳಲಿಲ್ಲ, ನೋವನ್ನು ಹೇಳಿಕೊಂಡಿದ್ದಾರೆ. ಮಿಸ್‌‍ಕಮ್ಯೂನಿಕೇಷನ್‌ ಆಗಿದೆ. ಖಾತೆ ಹಂಚಿಕೆ ವಿಚಾರವಾಗಿ ಮಾಧ್ಯಮಗಳಲ್ಲಿ ಚರ್ಚೆ ಮಾಡಲಾಗುವುದಿಲ್ಲ ಎಂದರು.

ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಹಾಗೂ ಮಾಧ್ಯಮ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ಮಳೆ, ಗುಡುಗು, ಸಿಡಿಲು, ಬಿಸಿಲು, ಸೂರ್ಯ ಹುಟ್ಟುವುದು, ಮುಳುಗುವುದು ಆಗುತ್ತಿರಬೇಕು. ನಾವು ಎಲ್ಲವನ್ನೂ ಫಸ್ಟ್‌ ಕ್ಲಾಸ್‌‍ ಮಾಡುತ್ತೇವೆ. ಸಂಪುಟದಲ್ಲಿ ಎಲ್ಲಾ ಹಿರಿಯರಿಗೂ ಅವಕಾಶ ನೀಡಿದ್ದೇವೆ, ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ತೆರಳಿದ ಬಳಿಕ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಯವರು ಏನು ಹೇಳಿದ್ದಾರೋ ಅದೇ ನನ್ನ ಅಭಿಪ್ರಾಯ. ಎಲ್ಲಾ ನಿವಾರಣೆಯಾಗಿದೆ ಎಂದು ಹೇಳಿ ತೆರಳಿದರು. ಇಂದು ಬೆಳಗ್ಗೆ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ರಾತ್ರಿ ನಾನು, ಮುಖ್ಯಮಂತ್ರಿ ಚರ್ಚೆ ಮಾಡಿದ್ದೇವೆ. ಕಾದು ನೋಡಿ ಎಂದರು.
ರಾಜೀನಾಮೆ ಹಿಂಪಡೆಯುವ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ. ನಿನ್ನೆ ನಾನು ಊರಿನಲ್ಲಿ ಇರಲಿಲ್ಲ, ಹೈಕಮಾಂಡ್‌ ಸಂಪರ್ಕಕ್ಕೆ ಸಿಗಲಿಲ್ಲ. ಸುರ್ಜೇವಾಲ ಬೆಂಗಳೂರಿನಲ್ಲೇ ಇದ್ದಾರೆಯೇ ನನಗೆ ಗೊತ್ತಿಲ್ಲ. ಇವತ್ತು ನನ್ನ ಯಾವ ಕಾರ್ಯಕ್ರಮಗಳೂ ಇಲ್ಲ. ಕಚೇರಿಯಲ್ಲೇ ಇರುತ್ತೇನೆ ಎಂದು ಹೇಳಿದರು.
ಬಳಿಕ ಸುರ್ಜೇವಾಲ ಅವರ ಆಹ್ವಾನದ ಮೇರೆಗೆ ಖಾಸಗಿ ಹೋಟೆಲ್‌ನಲ್ಲಿ ರಾಮಲಿಂಗಾರೆಡ್ಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಶತಾಯಗತಾಯ ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕೆಂದು ಪಟ್ಟು ಹಿಡಿದಿರುವ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಕಾಲವಕಾಶ ನೀಡುತ್ತೇನೆ, ನನ್ನ ನಿರ್ಧಾರದಲ್ಲಿ ಬದಲಾವಣೆ ಇರುವುದಿಲ್ಲ, ನಿಮ ಅಭಿಪ್ರಾಯ ಹೇಳಿ ಎಂದು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ನಡುವೆ ರಾಮಲಿಂಗಾರೆಡ್ಡಿಯವರನ್ನು ಬೆಂಬಲಿಸುವ 7 ಜನ ಮಾಜಿ ಮೇಯರ್‌ಗಳು, 87 ಮಂದಿ ಪಾಲಿಕೆಯ ಮಾಜಿ ಸದಸ್ಯರು ಪ್ರತ್ಯೇಕ ಸಭೆ ನಡೆಸಿದ್ದು, ರಾಮಲಿಂಗಾರೆಡ್ಡಿಯವರನ್ನು ಕಡೆಗಣಿಸಿದರೆ, ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ತಾವು ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಕಾಂಗ್ರೆಸ್‌‍ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

RELATED ARTICLES

Latest News