ನವದೆಹಲಿ, ಏ.27- ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೈಕೋರ್ಟ್ ವಿಚಾರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆಗೆ ತಾವು ಅಥವಾ ತಮ್ಮ ಪರ ವಕೀಲರು ಹಾಜರಾಗುವುದಿಲ್ಲ ಎಂದು ಕೇಜ್ರಿವಾಲ್ ಲಿಖಿತವಾಗಿ ತಿಳಿಸಿದ್ದಾರೆ.
ಪತ್ರದಲ್ಲಿ ಕೇವಲ ಸತ್ಯಾಗ್ರಹದ ಘೋಷಣೆಯಷ್ಟೇ ಅಲ್ಲದೆ ತಮ್ಮ ನಿರ್ಧಾರದ ಹಿಂದಿನ ನೈತಿಕ ಮತ್ತು ವೈಯಕ್ತಿಕ ಕಾರಣಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.ವಿಚಾರಣೆಗೆ ಹಾಜರಾಗದಿದ್ದರೆ ಕಾನೂನಾತ್ಮಕವಾಗಿ ತನಗೆ ತೊಂದರೆಯಾಗಬಹುದು ಮತ್ತು ಏಕಪಕ್ಷೀಯ ಆದೇಶ ಹೊರಬರಬಹುದು ಎಂಬ ಅರಿವು ತನಗಿದೆ. ಹೀಗಿದ್ದರೂ ತಪ್ಪು ವ್ಯವಸ್ಥೆಯ ಮುಂದೆ ಮಂಡಿಯೂರುವುದಕ್ಕಿಂತ ಆ ಶಿಕ್ಷೆಯನ್ನು ಅನುಭವಿಸಲು ಸಿದ್ಧ ಎಂದು ಹೇಳಿದ್ದಾರೆ.
ಈ ನಿರ್ಧಾರವನ್ನು ಸತ್ಯಾಗ್ರಹ ಎಂದು ಬಣ್ಣಿಸಿದ ಅವರು ನ್ಯಾಯಾಂಗದ ನೈತಿಕತೆಯನ್ನು ಎತ್ತಿ ಹಿಡಿಯಲು ನಾನು ಈ ಅಹಿಂಸಾತ್ಮಕ ಮಾರ್ಗವನ್ನು ಅನುಸರಿಸುತ್ತಿರುವುದಾಗಿ ತಿಳಿಸಿದ್ದಾರೆ. ಸತ್ಯಾಗ್ರಹವೆಂದರೆ ಕೇವಲ ಪ್ರತಿರೋಧವಲ್ಲ, ಬದಲಾಗಿ ಅಧಿಕಾರದಲ್ಲಿರುವವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ನೀಡುವ ಅವಕಾಶ ಎಂದು ಅವರು ಗಾಂಧಿ ತತ್ವಗಳನ್ನು ಉಲ್ಲೇಖಿಸಿದ್ದಾರೆ.
ಮೊದಲು ಅನ್ಯಾಯವನ್ನು ಸರಿಪಡಿಸಲು ಅಧಿಕೃತವಾಗಿ ವಿನಂತಿಸುವುದು. ಮನವಿ ವಿಫಲವಾದಾಗ ಮಾತ್ರ ಅಹಿಂಸಾತ್ಮಕವಾಗಿ ಸಹಕರಿಸದಿರುವುದು ಸತ್ಯಾಗ್ರಹದ ನಿಜವಾದ ಶಿಸ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
