ಬೆಂಗಳೂರು,ಜ.30- ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಸೇರಿದ ಕೃಷಿ ಜಮೀನು, ನಿವೇಶನ ಸೇರಿದಂತೆ 177.3 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ತನಿಖೆ ವೇಳೆ ಕೆ.ಸಿ.ವೀರೇಂದ್ರ ಮತ್ತು ಸಹಚರರು ಈ ಪ್ರಕರಣದ ಕಿಂಗ್ ಪಿನ್ ಎನ್ನವುದು ದೃಢವಾಗಿದೆ. ನೂರಾರು ಬೇನಾಮಿ ಖಾತೆ (ಮ್ಯೂಲ್ ಅಕೌಂಟ್) ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. 177.3 ಕೋಟಿ ರೂ. ಮೌಲ್ಯದ ಆಸ್ತಿ ಅಕ್ರಮ ಹಣದಿಂದ ಸಂಪಾದನೆ ಮಾಡಿದ್ದು ಎನುವುದು ಪತ್ತೆಯಾಗಿದ್ದು, ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಆಸ್ತಿ ಸೀಜ್ ಮಾಡಲಾಗಿದೆ.
ಈ ಹಿಂದೆ ಪ್ರಕರಣ ಸಂಬಂಧ 60ಕ್ಕೂ ಹೆಚ್ಚು ಸ್ಥಳದಲ್ಲಿ ಇ ಡಿ ದಾಳಿ ನಡೆಸಿ ಚಿನ್ನ, ನಗದು, ಬೆಳ್ಳಿ, ವಾಹನಗಳನ್ನು ವಶಪಡಿಸಿಕೊಂಡಿತ್ತು. 177.3 ಕೋಟಿ ರೂ. ಸೇರಿ ಈವರೆಗೆ ಒಟ್ಟಾರೆ ಪ್ರಕರಣದಲ್ಲಿ 320 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅಲ್ಲದೇ ತನಿಖೆ ವೇಳೆ 2,300 ಕೋಟಿ ರೂ. ಅಧಿಕ ಅಕ್ರಮ ನಡೆದಿರುವುದು ಪತ್ತೆಯಾಗಿದ್ದು, ಇ.ಡಿ. ತನಿಖೆ ಮುಂದುವರಿದಿದೆ.
ಈ ಹಿಂದೆ ಇ ಡಿ ದಾಳಿ ವೇಳೆ ವೀರೇಂದ್ರ ಪಪ್ಪಿ ಮನೆ, ಕಚೇರಿ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿದ ವೇಳೆ ಒಟ್ಟು 24 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಜೊತೆಗೆ ವೀರೇಂದ್ರ ಪಪ್ಪಿ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಚಲಾಯಿಸುತ್ತಿದ್ದುದು ಪತ್ತೆಯಾಗಿದ್ದು, ಈ ವೆಬ್‌ಸೈಟ್‌ಗಳ ಮೂಲಕ ಬಂದ ಹಣವನ್ನು ಅಕ್ರಮ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ಒಟ್ಟು 24 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸಿಕ್ಕಿರುವ ಬಗ್ಗೆ ಇ ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ ಸೇರಿದಂತೆ ವೀರೇಂದ್ರ ಪಪ್ಪಿ ಮನೆ, ಕಚೇರಿ, ಆಪ್ತರಿಗೆ ಸೇರಿದ ಸ್ಥಳಗಳಲ್ಲಿ ಇ ಡಿ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಳಿ ಮಾಡಲಾಗಿತ್ತು. ದಾಳಿ ವೇಳೆ ಬರೋಬ್ಬರಿ 24 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದಾಗಿ ಇ ಡಿ ತಿಳಿಸಿತ್ತು.
ಆನ್ ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ವೀರೇಂದ್ರ ಚಲಾಯಿಸುತ್ತಿದ್ದು ಪತ್ತೆಯಾಗಿದೆ. ಈ ವೆಬ್‌ಸೈಟ್‌ಗಳ ಮೂಲಕ ಬಂದ ಹಣವನ್ನು ಅಕ್ರಮ ವರ್ಗಾವಣೆ ಮಾಡಿರುವುದು ಕೂಡ ಬೆಳಕಿಗೆ ಬಂದಿತ್ತು. ಕೋಟಿಗಟ್ಟಲೆ ಮೌಲ್ಯದ ಅಂತರಾಷ್ಟ್ರೀಯ ಪ್ರವಾಸ ಟಿಕೆಟ್‌ಗಳ ಖರೀದಿ, ಮ್ಯೂಲ್ ಖಾತೆಗಳಿಂದ ಹಣ ಹಂಚಿಕೆ ಆಗಿದ್ದ ಬಗ್ಗೆಯೂ ಇ ಡಿ ಸಾಕ್ಷಿ ಕಲೆಹಾಕಿದೆ. ಇನ್ನು ವೀರೇಂದ್ರ ಪಪ್ಪಿ ಹಾಗೂ ಕುಟುಂಬದವರು ಬಳಸುತ್ತಿದ್ದ ಲಕ್ಸುರಿ ಕಾರುಗಳು ಬೇರೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರಿನಲ್ಲಿ ನೋಂದಣಿ ಆಗಿರುವುದು ಪತ್ತೆಯಾಗಿತ್ತು.
ಅನಿಲ್ ಗೌಡ ಎಂಬುವರ ಹೆಸರಿನಲ್ಲಿ ಕಾರು ನೋಂದಣಿಯಾಗಿದ್ದು, ೇನೊೆಸಿಯಾ ಕಂಪೆನಿಯ ಗುಲ್ಯಾನ್ ಖತ್ತರ್ ಹಣ ಹಾಕಿರುವ ರೇಂಜ್ ರೋವರ್ ಕಾರು ಪತ್ತೆಯಾಗಿದೆ. ಒಟ್ಟಾರೆ ದಾಳಿಯಲ್ಲಿ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿತ್ತು.
ಇ ಡಿ ದಾಳಿ ವೇಳೆ ಭಾರೀ ನಗದು ಪತ್ತೆ :
ವಿರೇಂದ್ರ ಪಪ್ಪಿ ತನ್ನ ಸಹಚರರೊಂದಿಗೆ ಸಿಕ್ಕಿಂನ ಗ್ಯಾಂಗ್ಟಾಕ್‌ಗೆ ಪ್ರಯಾಣಿಸಿದ್ದರು. ಅಲ್ಲಿ ಅವರು ಕ್ಯಾಸಿನೊಗಾಗಿ ಒಂದು ತುಂಡು ಭೂಮಿಯನ್ನು ಗುತ್ತಿಗೆಗೆ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಸಂಸ್ಥೆಯು ವಿರೇಂದ್ರ ಪಪ್ಪಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ 30 ಕಟ್ಟಡಗಳ ಮೇಲೆ ದಾಳಿ ನಡೆಸಿದ ಒಂದು ದಿನದ ನಂತರ, ಸುಮಾರು ಒಂದು ಕೋಟಿ ವಿದೇಶಿ ಕರೆನ್ಸಿ, ಸುಮಾರು 6 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು ಮತ್ತು ಸುಮಾರು 10 ಕೆ ಜಿ ತೂಕದ ಬೆಳ್ಳಿ ವಸ್ತುಗಳು ಮತ್ತು ನಾಲ್ಕು ವಾಹನಗಳು ಸೇರಿದಂತೆ 12 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು.
ಕೇಂದ್ರ ತನಿಖಾ ಏಜೆನ್ಸಿಯು 17 ಬ್ಯಾಂಕ್ ಖಾತೆಗಳು ಮತ್ತು ಎರಡು ಬ್ಯಾಂಕ್ ಲಾಕರ್‌ಗಳನ್ನು ಸಹ ಸ್ಥಗಿತಗೊಳಿಸಿದೆ. ವೀರೇಂದ್ರ ಪಪ್ಪಿ ಅವರ ಸಹೋದರ ಕೆ.ಸಿ.ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್ ರಾಜ್ ಅವರ ಮನೆಗಳಿಂದ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಸಹಚರರಾದ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಮತ್ತು ಪೃಥ್ವಿ ಎನ್ ರಾಜ್ ಅವರು ದುಬೈಯಿಂದ ಆನ್‌ಲೈನ್ ಗೇಮಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಗೋವಾದಲ್ಲಿ, ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ವಿರೇಂದ್ರ ಪಪ್ಪಿಗೆ ಸಂಬಂಧಿಸಿದ ಐದು ಕ್ಯಾಸಿನೊಗಳಾದ ಪಪ್ಪೀಸ್ ಕ್ಯಾಸಿನೊ ಗೋಲ್‌್ಡ, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೃಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊಗಳಲ್ಲಿ ಇಡಿ ಶೋಧ ನಡೆಸಿದೆ.
ಆರೋಪಿತ ಕೆ. ಸಿ. ವೀರೇಂದ್ರ ಪಪ್ಪಿ ಅವರು ಕಿಂಗ್ 567, ರಾಜಾ 567, ಪಪ್ಪೀಸ್ 003 ಮತ್ತು ರತ್ನಾ ಗೇಮಿಂಗ್‌ನಂತಹ ಹಲವಾರು ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಶೋಧ ಕಾರ್ಯಾಚರಣೆಯ ವೇಳೆ ಬಹಿರಂಗವಾಗಿದೆ. ಇದಲ್ಲದೆ, ಆರೋಪಿಯ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ದುಬೈಯಿಂದ ಮೂರು ವ್ಯಾಪಾರ ಘಟಕಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟಕಗಳು ಕೆ.ಸಿ.ವೀರೇಂದ್ರ ಅವರ ಕಾಲ್ ಸೆಂಟರ್‌ಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ ಎನ್ನಲಾಗಿದೆ.
