ಮೈಸೂರು,ಜ.30- ನಕಲಿ ಒಡವೆಗಳನ್ನ ಗಿರವಿ ಇಟ್ಟು ಖಾಸಗಿ ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇಲೆ ಚಿನ್ನಾಭರಣ ಮೌಲ್ಯಮಾಪಕ ಸೇರಿದಂತೆ 7 ಮಂದಿ ವಿರುದ್ಧ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಅಬ್ದುಲ್ ಜಮೀಲ್, ಮಂಡ್ಯದ ಸಾಗರ್, ಪುಟ್ಟರಾಜು, ರವಿಕುಮಾರ್, ಈತನ ಪತ್ನಿ ದಿವ್ಯ, ಬೆಂಗಳೂರಿನ ನಾಗರತ್ನರೆಡ್ಡಿ ಹಾಗೂ ಮೌಲ್ಯಮಾಪಕ ಟಿ.ನರಸೀಪುರದ ರವೀಂದ್ರ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್‌ಗೆ 2024 ರ ಮಾರ್ಚ್ 14 ರಂದು 6 ಆರೋಪಿಗಳು ಒಟ್ಟು 782 ಗ್ರಾಂ ಚಿನ್ನಾಭರಣ ಗಿರವಿ ಇಟ್ಟು 56.78 ಲಕ್ಷ ರೂ. ಸಾಲ ಪಡೆದಿದ್ದಾರೆ.
ಈ ಚಿನ್ನಾಭರಣವನ್ನ ರವೀಂದ್ರ ಕುಮಾರ್ ಎಂಬುವವರು ಪರಿಶೀಲಿಸಿ ಅಸಲಿ ಚಿನ್ನವೆಂದು ಅಧಿಕೃತವಾಗಿ ಸರ್ಟಿಫೈ ಮಾಡಿದ್ದಾರೆ. ಈ ಆಧಾರದ ಮೇಲೆ ಗಿರವಿ ಸಾಲ ನೀಡಲಾಗಿದೆ. ಕಳೆದ ಜ. 14 ರಂದು ಗಿರವಿ ಇಡಲಾಗಿರುವ ಆಭರಣಗಳನ್ನು ಮರುಮೌಲ್ಯಮಾಪನ ಮಾಡಲು ರಮೇಶ್ ಎಂಬುವರು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ನಕಲಿ ಚಿನ್ನವೆಂದು ಬೆಳಕಿಗೆ ಬಂದಿದೆ.
ಈ ಸಂಬಂಧ ಬ್ಯಾಂಕ್‌ನ ಮುಖ್ಯಸ್ಥರಾದ ಸುರೇಶ್ ಕಣ್ಣನ್ ಎಂಬುವವರು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಏಳು ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
