ಬೆಂಗಳೂರು,ಏ.18- ರಾಜ್ಯಾದ್ಯಂತ ಉಷ್ಣ ಅಲೆ (ಹೀಟ್ವೇವ್) ಆವರಿಸತೊಡಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಬೇಗೆಗೆ ಜನ ತತ್ತರಿಸುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಈ ಭಾಗಗಳಲ್ಲಿ ತಾಪಮಾನ 45 ಡಿ.ಸೆ.ಗೆ ಏರುವ ಸಾಧ್ಯತೆ ಇದೆ.
ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು ಬೇಡ ಮತ್ತು ಹೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಕರಾವಳಿಯಲ್ಲಂತೂ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಉ.ಕನ್ನಡದಲ್ಲಿ ಮುಂದಿನ ತಾಪಮಾನ 37 ಡಿ.ಸೆ. ಇದ್ದು, 42 ಡಿಗ್ರಿಗೂ ಏರಿಕೆಯಾಗುವ ಸಾಧ್ಯತೆಯಿದೆ.ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಈ ನಡುವೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಾಗಲಕೋಟೆ, ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಯಲ್ಲಿ ಉಷ್ಣ ಅಲೆ ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ.ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದು ಬೇಡ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಿನಲ್ಲಿ ಆಟವಾಡುವುದನ್ನು ನಿಯಂತ್ರಿಸಲು ಸೂಚಿಸಲಾಗಿದೆ.
ಉಷ್ಣಾಘಾತದಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನ 12 ರಿಂದ 4 ಗಂಟೆವರೆಗೂ ಸೂರ್ಯನ ಬೆಳಕಿಗೆ ನೇರ ಮೈ ಒಡ್ಡುವುದನ್ನು ತಪ್ಪಿಸಿ, ಹೆಚ್ಚು ನೀರು ಸೇವಿಸಿ. ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ರಸ ಸೇವಿಸುವುದು ಸಡಿಲವಾದ ಮತ್ತು ತಿಳಿಬಣ್ಣದ ಉಡುಪುಗಳನ್ನು ಧರಿಸುವುದು, ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸುವಂತೆ ಮಾರ್ಗದರ್ಶನ ನೀಡಲಾಗಿದೆ.
