ಬೆಂಗಳೂರು, ಮೇ 30- ನಿನ್ನೆ ನಗರದಲ್ಲಿ ಸುರಿದ ಭಾರಿ ಮಳೆ ಸಿಲಿಕಾನ್ ಸಿಟಿಯ ಬಣ್ಣ ಬಯಲು ಮಾಡಿದೆ. ನಿನ್ನೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆ ಮತ್ತೊಮ್ಮೆ ನಗರದ ಮೂಲಸೌಕರ್ಯಗಳ ದುರ್ಬಲತೆಯನ್ನು ಬಹಿರಂಗ ಗೊಳಿಸಿದೆ.
ವಿಜಯನಗರದಲ್ಲಿ ಕಂಪೌಂಡ್ ಗೋಡೆ ಕುಸಿದು ಆಟೋ ಚಾಲಕನೊಬ್ಬ ಮೃತಪಟ್ಟರೆ, ನಗರದ ವಿವಿಧ ಭಾಗಗಳಲ್ಲಿ ಮರಗಳು ಉರುಳಿ ಮೂವರು ಗಾಯಗೊಂಡಿದ್ದಾರೆ. ರಸ್ತೆಗಳು ಜಲಾವೃತಗೊಂಡಿದ್ದರೆ, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಗೋಡೆ ಕುಸಿದು ಆಟೋ ಚಾಲಕ ದುರ್ಮರಣ:
ವಿಜಯನಗರ ಕ್ಲಬ್‌ನ ಕಂಪೌಂಡ್ ಗೋಡೆ ಕುಸಿದು ಆಟೋ ಮೇಲೆ ಬಿದ್ದ ಪರಿಣಾಮ 52 ವರ್ಷದ ಆಟೋ ಚಾಲಕ ಶಿವಬೋರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದ್ದೂರು ಮೂಲದ ಶಿವಬೋರಯ್ಯ ಅತ್ತಿಗುಪ್ಪೆಯಲ್ಲಿ ವಾಸವಿದ್ದು, ಹಲವು ವರ್ಷಗಳಿಂದ ನಗರದಲ್ಲಿ ಬಾಡಿಗೆ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ನಿನ್ನೆ ಸಂಜೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ವಿಜಯನಗರ ಕ್ಲಬ್ ಸಮೀಪದ ರಸ್ತೆಯಲ್ಲಿ ಆಟೋ ನಿಲ್ಲಿಸಿ ಅದರೊಳಗೆ ಕುಳಿತಿದ್ದ ವೇಳೆ, ಭಾರೀ ಮಳೆಯಿಂದ ಕ್ಲಬ್‌ನ ಕಂಪೌಂಡ್ ಗೋಡೆ ಕುಸಿದು ಆಟೋ ಮೇಲೆ ಬಿದ್ದಿದೆ. ಗೋಡೆ ಬೀಳುವ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರೊಳಗಿದ್ದ ಶಿವಬೋರಯ್ಯ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಪಕ್ಕದಲ್ಲೇ ನಿಲ್ಲಿಸಿದ್ದ ಮತ್ತೊಂದು ಆಟೋ ಕೂಡ ಹಾನಿಗೊಳಗಾಗಿದ್ದು, ಅದರಲ್ಲಿ ಯಾರೂ ಇರದ ಕಾರಣ ಮತ್ತಷ್ಟು ಅನಾಹುತ ತಪ್ಪಿದೆ. ಗೋಡೆಯೊಂದಿಗೆ ಎರಡು ವಿದ್ಯುತ್ ಕಂಬಗಳೂ ಆಟೋ ಮೇಲೆ ಬಿದ್ದಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಭಾರೀ ಮಳೆಯಿಂದ ಗೋಡೆಯ ಅಡಿಪಾಯದ ಮಣ್ಣು ಸಡಿಲ ಗೊಂಡು ಕುಸಿದಿರುವ ಸಾಧ್ಯತೆ ವ್ಯಕ್ತವಾಗಿದ್ದು, ವಿಜಯನಗರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಗರದಾದ್ಯಂತ ಮರ ಉರುಳಿ ಮೂವರಿಗೆ ಗಾಯ:
ಭಾರೀ ಗಾಳಿ-ಮಳೆಗೆ ನಗರದ ಹಲವು ಭಾಗಗಳಲ್ಲಿ ಮರಗಳು ಹಾಗೂ ಕೊಂಬೆಗಳು ಧರೆಗೆ ಉರುಳಿದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಜೆ.ಪಿ.ನಗರದ ಪುಟ್ಟೇನಹಳ್ಳಿ ಸಮೀಪದ ಆರ್.ಬಿ. ಲೇಔಟ್‌ನಲ್ಲಿ ಬೃಹತ್ ಮರ ಉರುಳಿ ಮೂವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿ ದ್ದಾರೆ.
ಎಚ್.ಎಸ್.ಆರ್. ಲೇಔಟ್, ವಿದ್ಯಾರಣ್ಯಪುರ, ದೀಪಾಂಜಲಿ ನಗರ, ಮತ್ತಿಕೆರೆ, ರಾಜರಾಜೇಶ್ವರಿ ನಗರ, ಕೆ.ಆರ್.ಪುರಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು ಹಾಗೂ ಕೊಂಬೆಗಳು ರಸ್ತೆಗಳ ಮೇಲೆ ಮತ್ತು ವಾಹನಗಳ ಮೇಲೆ ಬಿದ್ದಿರುವ ಘಟನೆಗಳು ವರದಿಯಾಗಿವೆ.
ಗಂಗಾನಗರದಲ್ಲಿ ಬೃಹತ್ ಮರ ಕಟ್ಟಡದ ಮೇಲೆ ಉರುಳಿಬಿದ್ದಿದ್ದು, ಆಗ್ರಹಾರ ದಾಸರಹಳ್ಳಿ, ಬಸವೇಶ್ವರ ವೃತ್ತ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮರಗಳು ಧರೆಗೆ ಉರುಳಿದವು. ಜಿಬಿಎ ಅರಣ್ಯ ವಿಭಾಗ ಮತ್ತು ಸ್ಥಳೀಯ ಪಾಲಿಕೆ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಕೈಗೊಂಡರು.
ಧಾರಾಕಾರ ಮಳೆಯಿಂದ ನಗರದ ಅನೇಕ ರಸ್ತೆಗಳು ಹೊಳೆಯಂತಾಗಿ ಮಾರ್ಪಟ್ಟವು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
ಶೇಷಾದ್ರಿಪುರಂ ಮುಖ್ಯ ರಸ್ತೆ, ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರೋಡ್ ಹಾಗೂ ಶಿವಾನಂದ ಸರ್ಕಲ್ ಅಂಡರ್‌ಪಾಸ್ ಸಂಪೂರ್ಣ ಜಲಾವೃತಗೊಂಡಿದ್ದವು. ಶಿವಾನಂದ ಸರ್ಕಲ್ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ಕಾರೊಂದು ಸಿಲುಕಿಕೊಂಡಿದ್ದು, ಅದನ್ನು ಹೊರತೆಗೆಯಲು ಚಾಲಕ ಹರಸಾಹಸ ಪಟ್ಟರು.ರಸ್ತೆಗಳಲ್ಲಿ ಎರಡು ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ಹಲವು ದ್ವಿಚಕ್ರ ವಾಹನಗಳು ಮಧ್ಯದಲ್ಲೇ ಸ್ಥಗಿತಗೊಂಡವು. ಡೆಲಿವರಿ ಸಿಬ್ಬಂದಿಯೊಬ್ಬರ ಬೈಕ್ ನೀರಿನಲ್ಲಿ ಮುಳುಗಿ ಕಾರ್ಯನಿರ್ವಹಿಸದೆ ಪರದಾಡುವಂತಾಯಿತು.
ಮರುಕಳಿಸಿದ ಸುರಕ್ಷತಾ ಪ್ರಶ್ನೆಗಳು :
ಇತಿ್ತೕಚೆಗಷ್ಟೇ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತದ ಆಘಾತ ಮಾಸುವ ಮುನ್ನವೇ ಮತ್ತೊಂದು ಗೋಡೆ ಕುಸಿತದಲ್ಲಿ ಜೀವ ಬಲಿಯಾಗಿರುವುದು ನಗರದಲ್ಲಿನ ಹಳೆಯ ಕಟ್ಟಡಗಳು, ಕಂಪೌಂಡ್ ಗೋಡೆಗಳು ಹಾಗೂ ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಭಾರೀ ಮಳೆಯ ಸಂದರ್ಭಗಳಲ್ಲಿ ಮರಗಳ ಕುಸಿತ, ಜಲಾವೃತ ರಸ್ತೆ, ಅಂಡರ್‌ಪಾಸ್ ಸಮಸ್ಯೆ ಮತ್ತು ಮೂಲಸೌಕರ್ಯಗಳ ವೈಫಲ್ಯ ಬೆಂಗಳೂರಿನ ನಾಗರಿಕರಿಗೆ ಮತ್ತೆ ಸಂಕಷ್ಟ ತಂದೊಡ್ಡಿದೆ. ನಗರದಲ್ಲಿ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ಮರಗಳು, ದುರ್ಬಲ ಗೋಡೆಗಳು ಹಾಗೂ ನೀರು ನಿಲ್ಲುವ ಪ್ರದೇಶಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯ ಮತ್ತೊಮ್ಮೆ ಸ್ಪಷ್ಟವಾಗಿದೆ.
ಮ್ಯಾನ್‌ಹೋಲ್ ಉಕ್ಕಿ ಹರಿದು ಆತಂಕ
ನಗರದ ಹಲವೆಡೆ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಭಯದಲ್ಲೇ ಸಂಚರಿಸಿದರು. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಯಿತು.
ಹೆಚ್ಚು ಮಳೆ ದಾಖಲಾದ ಪ್ರದೇಶಗಳು:
ನಾಯಂಡಹಳ್ಳಿ ಹಾಗೂ ಕಾಟನ್‌ಪೇಟೆ ತಲಾ 3.9 ಸೆಂ.ಮೀ. ಮಳೆಯೊಂದಿಗೆ ಅಗ್ರಸ್ಥಾನದಲ್ಲಿದ್ದವು. ಸಂಪಂಗಿರಾಮನಗರ ಹಾಗೂ ಹಂಪಿನಗರದಲ್ಲಿ ತಲಾ 3.6 ಸೆಂ.ಮೀ., ಪುಲಕೇಶಿನಗರ ಮತ್ತು ಚಾಮರಾಜಪೇಟೆಯಲ್ಲಿ ತಲಾ 3.4 ಸೆಂ.ಮೀ., ಆರ್.ಆರ್.ನಗರದಲ್ಲಿ 3.3 ಸೆಂ.ಮೀ. ಮಳೆಯಾಗಿದೆ.ಬಾಣಸವಾಡಿ 3.1 ಸೆಂ.ಮೀ., ಗುಟ್ಟಹಳ್ಳಿ, ವಿವಿಪುರ ಹಾಗೂ ಮನೋರಾಯನಪಾಳ್ಯದಲ್ಲಿ ತಲಾ 2.7 ಸೆಂ.ಮೀ. ಮಳೆ ದಾಖಲಾಗಿದ್ದು, ನಗರದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
