ಬೆಂಗಳೂರು, ಮಾ.1- ಮೂವರು ಶಾಸಕರು ಸೇರಿದಂತೆ ಸಾವಿರಾರು ಮಂದಿ ದುಬೈನಲ್ಲಿ ಸಿಲುಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತ ಲಕ್ಷಾಂತರ ಮಂದಿ ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇರಾನ್-ಇಸ್ರೇಲ್ ಯುದ್ಧದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರುಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ವಿದೇಶದಲ್ಲಿ ಸಿಲುಕಿರುವವರನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡಬೇಕಿದೆ. ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಕರ್ನಾಟಕದ ಶಾಸಕ ಎ.ಸಿ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಶಾಸಕ ಭರತ್‌ರೆಡ್ಡಿ ಅವರ ಕುಟುಂಬದ ಸದಸ್ಯರು ದುಬೈನಲ್ಲಿ ಸಿಲುಕಿದ್ದಾರೆ ಎಂದು ಮಾಹಿತಿ ಇದೆ. ಯಾರಿಗೂ ಆತಂಕ ಬೇಡ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸುತ್ತೇವೆ ಎಂದರು.
ಭಾರತ ಶಾಂತಿ ಬಯಸುವ ದೇಶ. ಈ ರೀತಿಯ ಯುದ್ಧಗಳು ಸರಿಯಲ್ಲ, ಅದರಲ್ಲೂ ಶಾಲೆಯ ಮೇಲೆ ದಾಳಿ ನಡೆಸಿ, 70 ಮಕ್ಕಳನ್ನು ಹತ್ಯೆ ಮಾಡಿರುವುದು ಖಂಡನೀಯ. ಟಿವಿಗಳಲ್ಲಿ ದಾಳಿಯ ದೃಶ್ಯಗಳನ್ನು ನೋಡಿದರೆ, ಗಾಬರಿಯಾಗುತ್ತಿದೆ. ಮಿಸೈಲ್‌ಗಳು ಡ್ರೋನ್‌ಗಳ ಮೂಲಕ ಏರ್‌ಸ್ಟ್ರೈಕ್ ನಡೆಸಲಾಗುತ್ತಿದೆ. ಇದು ಆತಂಕದ ವಾತಾವರಣ ಎಂದು ಹೇಳಿದರು.
ಸಂಕಷ್ಟದಲ್ಲಿ ಸಿಲುಕಿದವರಿಗೆ ಕೇಂದ್ರ ಸರ್ಕಾರ ಸಹಾಯವಾಣಿ ಆರಂಭಿಸಿದೆ. ರಾಜ್ಯ ಸರ್ಕಾರ ಪ್ರತ್ಯೇಕವಾದ ಸಹಾಯವಾಣಿ ತೆರೆಯುವುದು ಸೂಕ್ತವಲ್ಲ. ವಿದೇಶದಲ್ಲಿರುವ ಕನ್ನಡದ ಸಂಘಟನೆಗಳು ಭಾರತೀಯರ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ ಸರ್ಕಾರ ವಿದೇಶದಲ್ಲಿರುವವರಿಗೆ ಆತಸ್ಥೈರ್ಯ ತುಂಬುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಡ ಹೇರುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.
ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ದುಬೈ ಹಾಗೂ ಇತರ ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾಗಿ ತಿಳಿದು ಬಂದಿದೆ. ಏನೇ ಆದರೂ ಶಾಂತಿ ಪಾಲನೆ ಮುಖ್ಯ. ಯಾರ ಆಸ್ತಿಗೂ ಹಾನಿಯಾಗಬಾರದು. ಕನ್ನಡಿಗರೂ ಸೇರಿದಂತೆ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಬೇಕಿದೆ ಎಂದು ಹೇಳಿದರು.
ಯುದ್ಧ ನಿಲ್ಲಿಸಲು ಕೇಂದ್ರ ಸರ್ಕಾರ ಅಮೇರಿಕಾದ ಮೇಲೆ ಒತ್ತಡ ಹೇರಬೇಕು. ಈ ಸಂಘರ್ಷದಿಂದಾಗಿ ವಿಶ್ವದ ಅರ್ಧ ಭಾಗಕ್ಕೆ ಸಂಪರ್ಕವೇ ಕಡಿತಗೊಂಡಂತಾಗಿದೆ. ಭಾರತಕ್ಕೆ ದುಬೈ ಹಾಗೂ ಸಿಂಗಾಪೂರದ ಮೂಲಕ ಬೇರೆ ಬೇರೆ ದೇಶಗಳಿಗೆ ವಿಮಾನ ಪ್ರಯಾಣಿಸುತ್ತಿದ್ದವು ಈಗ ಎಲ್ಲವೂ ಸ್ಥಗಿತವಾಗಿವೆ ಎಂದರು.
ದಕ್ಷಿಣ ಭಾರತದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಕುಟುಂಬಕ್ಕೆ ಒಬ್ಬರಂತೆ ದುಬೈನಲ್ಲಿದ್ದು, ಕೆಲಸ ಮಾಡುತ್ತಿದ್ದಾರೆ. ಸೌದಿ ಅರೇಬಿಯಾ ಇಂದು ಅಭಿವೃದ್ಧಿಯಾಗಲು ಭಾರತೀಯ ಕೆಲಸಗಾರರೇ ಕಾರಣ. ಈ ಯುದ್ಧದಿಂದ ಭಾರತಕ್ಕೆ ಗಂಡಾತರವಾಗಲಿದೆ ಎಂದರು.
