ಬೆಂಗಳೂರು, ಆ.2- ಕೇರಳದ ವೈನಾಡು ಹಾಗೂ ಕೊಡಗು ಸೇರಿದಂತೆ ಕಬಿನಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಈಗಾಗಲೇ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.
ಈ ಸಂಬಂಧ ಜಲಸಂಪನೂಲ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಜಲಾಶಯ ಭರ್ತಿಯಾಗುತ್ತಿದ್ದಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ತಗ್ಗು ಪ್ರದೇಶದಲ್ಲಿರುವ ನಾಲೆಗಳು ಮತ್ತು ಕೆರೆಗಳಿಗೆ ತಕ್ಷಣವೇ ನೀರು ಹರಿಸಬೇಕೆಂದು ಸೂಚಿಸಿದ್ದಾರೆ.
ಅಗತ್ಯವಿರುವ ಕಡೆ ನಾಲೆಗಳು ಮತ್ತು ಕೆರೆಗಳಿಗೆ ನೀರು ತುಂಬಿಸಿ ಕುಡಿಯುವ ನೀರಿಗೆ ಮೊದಲ ಪ್ರಶಸ್ತಿ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.ಕಳೆದ ಕೆಲವು ತಿಂಗಳುಗಳ ಹಿಂದೆ ಬೇಸಿಗೆಯ ಆರಂಭದಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದರಿಂದ ಕಬಿನಿ ಜಲಾಶಯದ ನೀರಿನ ಮಟ್ಟ ಕುಸಿದು, ಜಲಕ್ಷಾಮದ ಭೀತಿ ಎದುರಾಗಿತ್ತು. ಆದರೆ, ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದಲ್ಲಿ ಕೇರಳದ ವೈನಾಡಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವುದರಿಂದ ಜಲಾಶಯಕ್ಕೆ ಒಂದೇ ಸಮನೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಜಲಾಶಯವು ಗರಿಷ್ಠ ಮಟ್ಟವನ್ನು (2284 ಅಡಿ) ತಲುಪುತ್ತಿರುವ ಕಾರಣ, ಸುರಕ್ಷತೆಯ ದೃಷ್ಟಿಯಿಂದ ಜಲಾಶಯಕ್ಕೆ ಬರುವ ಹೆಚ್ಚುವರಿ ನೀರನ್ನು ಯಾವುದೇ ಕ್ಷಣದಲ್ಲಿ ನದಿ ಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿಸಲಾಗುವುದು. ಈಗಾಗಲೇ ಒಟ್ಟು 27,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು (ನದಿ ಮತ್ತು ಕಾಲುವೆ ಸೇರಿ), ನದಿ ಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ತರಾತುರಿಯಲ್ಲಿ ನದಿ ದಾಟದಂತೆ ಆಡಳಿತ ಮಂಡಳಿ ಮತ್ತು ಸರ್ಕಾರವು ಮನವಿ ಮಾಡಿದೆ. ಈ ಬೆಳವಣಿಗೆಯಿಂದ ಕಾವೇರಿ ಕೊಳ್ಳದ ರೈತರಲ್ಲಿ ಸಂತಸ ಮೂಡಿದ್ದರೂ, ಪ್ರವಾಹದ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.
ಜಲಾಶಯದ ಮಟ್ಟ
ಗರಿಷ್ಠ ನೀರಿನ ಮಟ್ಟ
2284.00 ಅಡಿಗಳು
ಪ್ರಸ್ತುತ ನೀರಿನ ಮಟ್ಟ: 2281.95 ಅಡಿಗಳು
ಜಲಾಶಯದ ಗರಿಷ್ಠ ನೀರಿನ ಮಿತಿ (ಸಾಮರ್ಥ್ಯ): 19.52 ಟಿಎಂಸಿ
ಪ್ರಸ್ತುತ ನೀರಿನ ಸಂಗ್ರಹ ಮಿತಿ: 18.20 ಟಿಎಂಸಿ
ಒಳಹರಿವು: 30,689 ಕ್ಯೂಸೆಕ್‌್ಸ
ಹೊರಹರಿವು:
ನದಿಗೆ: 25,000 ಕ್ಯೂಸೆಕ್
ಕಾಲುವೆಗೆ: 2,000 ಕ್ಯೂಸೆಕ್
ಒಟ್ಟು ಹೊರಹರಿವು: 27,000 ಕ್ಯೂಸೆಕ್
