ಮೈಸೂರು,ಸೆ.18- ಒಡಿಶಾದ ಬಾಲಸೋರ್‌ನಲ್ಲಿ ಪತ್ತೆಯಾದ ಐದು ಅಪರೂಪದ ವಿದೇಶಿ ಒರಾಂಗುಟಾನ್ ಮರಿಗಳ ಚಿಕಿತ್ಸೆಗೆ ಮೈಸೂರು ಮೃಗಾಲಯದ ವೈದ್ಯರ ನೆರವು ಪಡೆಯಲಾಗಿದೆ. ಸೆ.9 ರಂದು ಬಡಪಲಿ ಗ್ರಾಮದ ಬಳಿ 6 ತಿಂಗಳಿಂದ ಒಂದು ವರ್ಷದೊಳಗಿನ 3 ಗಂಡು, 2 ಹೆಣ್ಣು ಮರಿಗಳು ಪತ್ತೆಯಾಗಿದ್ದವು.
ಬೊರ್ನಿಯೊ ಮತ್ತು ಸುಮಾತ್ರಾ ಕಾಡುಗಳಲ್ಲಿ ಮಾತ್ರ ಇರುವ ಈ ಪ್ರಾಣಿಗಳು ಭಾರತದಲ್ಲಿ ಕಂಡುಬಂದಿದ್ದು, ವನ್ಯಜೀವಿ ಕಳ್ಳಸಾಗಣೆ ಶಂಕೆ ವ್‌ಯಕ್ತವಾಗಿದೆ. ಸದ್ಯ ಮರಿಗಳನ್ನು ನಂದನಕಾನನ್ ಮೃಗಾಲಯದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ವಿಶೇಷ ತಪಾಸಣಾ ತಂಡದಲ್ಲಿ ಮೈಸೂರು ಮೃಗಾಲಯದ ಹಿರಿಯ ಪಶುವೈದ್ಯರಾದ ಡಾ.ಮದನ್ ಕೊಂಪಲ್, ಡಾ.ಶಶಿಧರ್ ಸೇರಿದ್ದಾರೆ. ತಪಾಸಣೆಯಲ್ಲಿ ಒಂದು ಮರಿಯಲ್ಲಿ ತೀವ್ರ ರಕ್ತಹೀನತೆ, ಎರಡರಲ್ಲಿ ಸಾಧಾರಣ ರಕ್ತಹೀನತೆ ಮತ್ತು ಜ್ವರ ಕಾಣಿಸಿಕೊಂಡಿದೆ.
ಚೇತರಿಕೆಯತ್ತ ಮರಿಗಳು :
ಮರಿಗಳಿಗೆ ಕಬ್ಬಿಣಾಂಶ, ಪ್ಯಾರಸಿಟಮಾಲ್ ನೀಡಲಾಗುತ್ತಿದೆ. ಪ್ರತಿ 3 ಗಂಟೆಗೊಮೆ ಬೇಬಿ ಮಿಲ್ಕ್, ಬೇಯಿಸಿದ ಸೇಬು, ಬಾಳೆಹಣ್ಣು ನೀಡಲಾಗುತ್ತಿದೆ. ಒತ್ತಡ ಕಡಿಮೆ ಮಾಡಲು ತೂಗುಜೋಕಾಲಿ, ಮೃದು ಬೊಂಬೆ ಮತ್ತು ಸಂಗೀತ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸುಧಾರಣೆ ಬಳಿಕ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
