ಡೆಹ್ರಾಡೂನ್, ಸೆ.18- ಉತ್ತರಾಖಂಡದ ಚಮೋಲಿ ಜಿಲ್ಲೆಯ ಔಲಿಯಲ್ಲಿ ನಡೆಯುತ್ತಿರುವ ಯುದ್ಧಾಭ್ಯಾಸದ ಭಾಗವಾಗಿ ಭಾರತೀಯ ಮತ್ತು ಅಮೆರಿಕದ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗಾಗಿ ಕಟ್ಟಡ ತೆರವು ಹಾಗೂ ಕೊಠಡಿ ಪ್ರವೇಶ ಕುರಿತ ಜಂಟಿ ತಾಲೀಮು ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಮುಖಾಮುಖಿ ಹೋರಾಟದ ಸನ್ನಿವೇಶಗಳನ್ನು ಹೋಲುವಂತೆ ಈ ತಾಲೀಮುಗಳನ್ನು ವಿನ್ಯಾಸಗೊಳಿಸಲಾಗಿತ್ತು. ಅಭ್ಯಾಸದಲ್ಲಿ ಡ್ರೋನ್‌ಗಳು, ರೋಬೋಟಿಕ್ ನಾಯಿಗಳು ಹಾಗೂ ಶ್ವಾನದಳಗಳ ಬೆಂಬಲದೊಂದಿಗೆ ದಾಳಿ ನಡೆಸುವ ತಂಡಗಳು ಭಾಗವಹಿಸಿದ್ದವು.
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ವಿಶೇಷ ತರಬೇತಿ ಪಡೆದ ಪಡೆಗಳು ಹಾಗೂ ತಂತ್ರಜ್ಞಾನದ ಸಮನ್ವಯ ಬಳಕೆಯನ್ನು ಈ ತಾಲೀಮುಗಳು ಪ್ರದರ್ಶಿಸಿದವು ಎಂದು ಪ್ರಕಟಣೆ ತಿಳಿಸಿದೆ.ಅಮೆರಿಕದ ಸೇನಾ ಸಿಬ್ಬಂದಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಭಾರತೀಯ ಸಹವರ್ತಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಅಭ್ಯಾಸದ ವೇಳೆ ಪ್ರದರ್ಶಿಸಲಾದ ಸಾಮರ್ಥ್ಯಗಳು ಮತ್ತು ತಂತ್ರಗಳ ಕುರಿತು ಉತ್ತಮ ತಿಳುವಳಿಕೆ ಪಡೆಯಲು ವಿವಿಧ ಉಪಕರಣಗಳನ್ನು ವೀಕ್ಷಿಸಿದರು.
ಭಾರತ-ಅಮೆರಿಕ ಜಂಟಿ ಸೇನಾ ಅಭ್ಯಾಸದ 22ನೇ ಆವೃತ್ತಿಯ ಉದ್ಘಾಟನಾ ಸಮಾರಂಭ ಮಂಗಳವಾರ ಔಲಿಯ ವಿದೇಶಿ ತರಬೇತಿ ಕೇಂದ್ರದಲ್ಲಿ ನಡೆಯಿತು. ಈ ಅಭ್ಯಾಸವು ಉತ್ತರಾಖಂಡದ ಔಲಿ ಮತ್ತು ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಪರ್ವತಮಯ ಮತ್ತು ಅರೆ-ಪರ್ವತಮಯ ಪ್ರದೇಶಗಳಲ್ಲಿ ಸಮಗ್ರ ಯುದ್ಧ ಗುಂಪುಗಳನ್ನು ನಿಯೋಜಿಸುವ ಎರಡೂ ಸೇನೆಗಳ ಜಂಟಿ ಸಾಮರ್ಥ್ಯವನ್ನು ಹೆಚ್ಚಿಸುವುದು ಅಭ್ಯಾಸದ ಉದ್ದೇಶವಾಗಿದೆ. ಇದರಲ್ಲಿ ಪದಾತಿ ದಳ ಕೇಂದ್ರಿತ ಕಾರ್ಯಾಚರಣೆಗಳಿಗೆ ವಿಶೇಷ ಒತ್ತು ನೀಡಲಾಗಿದೆ.
