ಬೆಂಗಳೂರು,ಸೆ.18-ಹಣಕ್ಕಾಗಿ ನೆರೆಮನೆಯ ಬಾಲಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕದ ವಿನಾಯಕ ನಗರದ ಪ್ರಜ್ವಲ್ (13) ಕೊಲೆಯಾದ ಬಾಲಕ. ಎರಡು ದಿನದ ಹಿಂದೆ ಗಣಪತಿ ಬಿಡಲು ಮೆರವಣಿಗೆಗೆ ಪಟಾಕಿ ತರಬೇಕೆಂದು ಪಕ್ಕದ ಮನೆಯ ನಿವಾಸಿ ಬಾಸ್ಕರ್‌ರೆಡ್ಡಿ ಎಂಬಾತ ಪ್ರಜ್ವಲ್‌ನನ್ನು ಪುಸಲಾಯಿಸಿಕೊಂಡು ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ.
ತದ ನಂತರ ಪ್ರಜ್ವಲ್ ಪೋಷಕರಿಗೆ ವಿಡಿಯೋ ಕರೆ ಮಾಡಿ ನಿಮ ಮಗ ನನ್ನ ಬಳಿ ಇದ್ದಾನೆ. ಹಣ ಕೊಡಬೇಂದು ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಬಾಲಕನಿಂದಲೂ ವಿಡಿಯೋ ಮಾಡಿಸಿ ಆತನ ಪೋಷಕರಿಗೆ ಬೆದರಿಕೆ ಹಾಕಿದ್ದ. ಈ ನಡುವೆ ತಾನು ಕೇಳಿದಷ್ಟು ಹಣ ಬಾಲಕನ ಪೋಷಕರಿಂದ ಬಾರದಿದ್ದಾಗ ಆರೋಪಿ ಬಾಸ್ಕರ್ ಕುಡಿದ ಮತ್ತಿನಲ್ಲಿ ಹಾಲೋಬ್ರಿಕ್‌್ಸನಿಂದ ಹೊಡೆದು ಬಾಲಕನನ್ನು ಕೊಲೆ ಮಾಡಿದ್ದಾನೆ.
ನಂತರ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಆಂಧ್ರಪ್ರದೇಶದ ಕಡೆಗೆ ಪರಾರಿಯಾಗುತ್ತಿದ್ದ ವೇಳೆ ಗಾಬರಿಯಲ್ಲಿ ಕಾರನ್ನು ಅಡ್ಡದಿಡ್ಡಿ ಚಲಾಯಿಸಿ ಗೋಡೆಗೆ ಡಿಕ್ಕಿ ಹೊಡೆದಿದ್ದಲ್ಲದೇ ಬಳಿಕ ಬಳ್ಳಾರಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಸರಣಿ ಅಪಘಾತ ಮಾಡಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಲ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಕಾರನ್ನು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ ಬಾಲಕನ ಶವ ನೋಡಿ ಒಂದು ತಕ್ಷ ಶಾಕ್ ಆಗಿದ್ದಾರೆ.ಈ ಬಾಲಕನ ಬಗ್ಗೆ ವಿಚಾರಿಸಿದಾಗ ಕಾರಿಗೆ ಅಡ್ಡ ಸಿಕ್ಕಿ ಮೃತಪಟ್ಟಿದ್ದಾನೆ.ನನ್ನ ಸ್ನೇಹಿತ ಹೇಳಿದಂತೆ ಆಂಧ್ರಪ್ರದೇಶದ ಕಡೆ ಮೃತದೇಹವನ್ನು ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಸುಳ್ಳು ಹೇಳಿ ನಾಟಕವಾಡಿದ್ದಾನೆ.
ಪೊಲೀಸರಿಗೆ ಈತನ ಮೇಲೆ ಅನುಮಾನ ಬಂದು ಠಾಣೆಗೆ ಕರೆದೊಯ್ದು ಸುದೀರ್ಘ ವಿಚಾರಣೆ ನಡೆಸಿದಾಗ ಬಾಲಕನನ್ನು ಈತನೇ ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಆರೋಪಿಗೆ ಸಹಕರಿಸಿದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.ಮಗನ ಕೊಲೆಯಾಗಿರುವ ವಿಷಯ ತಿಳಿದು ಪ್ರಜ್ವಲ್ ಪೋಷಕರು , ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಹಣದ ಆಸೆಗಾಗಿ ಬಾಳಿ ಬದುಕಬೇಕಾಗಿದ್ದ ನೆರೆಮನೆಯ ಬಾಲಕನ ಉಸಿರು ನಿಲ್ಲಿಸಿರುವುದು ದುರ್ದೈವ.
