ಬೆಂಗಳೂರು,ಸೆ.18- ಮಳೆಗಾಗಿ ನಿತ್ಯ ಮುಗಿಲು ನೋಡುತ್ತಿದ್ದ ಜನತೆಗೆ ವರುಣ ಕೃಪೆ ತೋರಿದ್ದು, ರಾಜ್ಯದ ವಿವಿಧೆಡೆ ತಂಪೆರೆದಿದ್ದಾನೆ.ಕೋಲಾರ, ತುಮಕೂರು, ರಾಮನಗರ, ಚಾಮರಾಜನಗರ, ದೊಡ್ಡಬಳ್ಳಾಪುರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಮಳೆಯಾಗಿದ್ದು, ಕೆಲವೇ ಕೆಲವು ಗಂಟೆ ಸುರಿದ ಮಳೆಯಿಂದಾಗಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ.
ದೊಡ್ಡಬಳ್ಳಾಪುರದಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.ಕೋಲಾರದಲ್ಲೂ ಸಹ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಇಲ್ಲಿವರೆಗೂ ಮಳೆ ಇಲ್ಲದೆ ಬೆಳೆ ಒಣಗಿ ನಾಶವಾಗಿದ್ದರೆ, ಈಗ ಮಳೆಯಿಂದ ಬೆಳೆಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋಲಾರ ತಾಲ್ಲೂಕಿನ ಚೋಡದೇನಹಳ್ಳಿ, ವಡಗೂರು, ಹರಟಿ, ಸೀತಿ ಗ್ರಾಮದಲ್ಲಿ ಮಳೆಯಾಗಿದೆ. ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ, ಮುಳಬಾಗಿಲು ತಾಲ್ಲೂಕಿನ ವಿವಿಧೆಡೆ ತುಂತುರು ಮಳೆಯಾಗಿದೆ.ಚೋಡದೇನಹಳ್ಳಿ ಗ್ರಾಮದಲ್ಲಿ ಸುರಿದ ಮಳೆಗೆ ಟೊಮ್ಯಾಟೊ, ಮುಸಿಕನ ಜೋಳ, ಹೂ ಸೇರಿದಂತೆ ಮತ್ತಿತರ ಬೆಳೆಗಳು ನಾಶವಾಗಿವೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಮೊನ್ನೆ ಸುರಿದ ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ರಾಮಗುಡ್ಡ ಕೆರೆ ಸಂಪೂರ್ಣವಾಗಿ ಕೋಡಿ ಬಿದ್ದಿದ್ದು, ರೈತರಲ್ಲಿ ಸಂತಸ ಮೂಡಿದೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲೂ ಸಹ ಸಾಧಾರಣ ಮಳೆಯಾಗಿದ್ದು, ಬೆಳೆಗೆ ಜೀವ ಬಂದಂತಾಗಿದೆ.
ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಹಾಸನ ಜಿಲ್ಲೆಯ ಬಾಗೂರು, ನುಗ್ಗೆಹಳ್ಳಿ ಹೋಬಳಿಯ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದು, ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದ ರೈತರಲ್ಲಿ ಹರ್ಷ ಮೂಡಿಸಿದೆ.ಮಳೆಯಿಲ್ಲದೆ ಬರದ ಛಾಯೆ ಆವರಿಸಿದ್ದ ಕೆಲವು ಭಾಗಗಳಲ್ಲಿ ವರುಣದೇವ ಕೃಪೆ ತೋರಿದ್ದು, ಕಳೆದ ಮೂರು ದಿನಗಳಿಂದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು, ರೈತರಲ್ಲಿ ಆಶಾಭವನೆ ಮೂಡಿದೆ.
