ಬೆಂಗಳೂರು, ಜೂನ್ 12: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸದಸ್ಯರ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರ ಗೆಲುವಿಗಾಗಿ ಪಕ್ಷವು ಇಂದು ಮಹತ್ವದ ಸಭೆ ನಡೆಸಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ H. D. Kumaraswamy ಅವರ ಜೆ.ಪಿ.ನಗರ ನಿವಾಸದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಸಭೆಗೆ ಮಾಜಿ ಪ್ರಧಾನಿ H. D. Deve Gowda ನೇತೃತ್ವ ವಹಿಸಲಿದ್ದು, ಪಕ್ಷದ ಎಲ್ಲಾ ಶಾಸಕರು, ಮಾಜಿ ಶಾಸಕರು, ಹಾಲಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಪೈಪೋಟಿ ತೀವ್ರಗೊಂಡಿದೆ. ಗುಪ್ತ ಮತದಾನ ನಡೆಯುವ ಕಾರಣ ಅಡ್ಡಮತದಾನದ ಸಾಧ್ಯತೆಯನ್ನು ತಡೆಯುವ ಬಗ್ಗೆ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಜೆಡಿಎಸ್‌ನ ಎಲ್ಲಾ 18 ಶಾಸಕರ ಮತಗಳು ಪಕ್ಷದ ಅಧಿಕೃತ ಅಭ್ಯರ್ಥಿ ಗೋವಿಂದರಾಜು ಅವರಿಗೆ ಸಿಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವ ಸಾಧ್ಯತೆ ಇದೆ.
ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಇನ್ನೂ ಸುಮಾರು 10 ಮತಗಳ ಅಗತ್ಯವಿದ್ದು, ಬಿಜೆಪಿ ಹೆಚ್ಚುವರಿ ಮತಗಳು ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ಮತಗಳನ್ನು ಸೆಳೆಯುವ ಕುರಿತು ನಾಯಕರು ಚರ್ಚಿಸಲಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ಮತಗಳು ಕಾಂಗ್ರೆಸ್ ಅಭ್ಯರ್ಥಿಯ ಪರ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗುತ್ತಿದೆ.
ಹಿಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಉದಾಹರಣೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಶಾಸಕರಿಗೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೊತೆಗೆ ಇತರೆ ಪಕ್ಷಗಳು ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಪಡೆಯುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ಈ ಚುನಾವಣೆ ಜೆಡಿಎಸ್‌ಗೆ ಪ್ರತಿಷ್ಠೆಯ ವಿಷಯವಾಗಿದ್ದು, ಅಭ್ಯರ್ಥಿಯ ಗೆಲುವಿಗಾಗಿ ಎಲ್ಲಾ ರೀತಿಯ ತಂತ್ರಗಳನ್ನು ರೂಪಿಸಲು ಪಕ್ಷದ ಹಿರಿಯ ನಾಯಕರು ಮುಂದಾಗಿದ್ದಾರೆ. ಬಿಜೆಪಿ ಶಾಸಕರ ಎರಡನೇ ಆದ್ಯತೆಯ ಮತಗಳನ್ನು ಪಡೆಯುವ ಸಾಧ್ಯತೆ ಸೇರಿದಂತೆ ಹಲವು ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯುವ ನಿರೀಕ್ಷೆಯಿದೆ.
