ಬೆಂಗಳೂರು, ಸೆ.8-ಗೌರಿ-ಗಣೇಶ ಹಬ್ಬದ ಆಚರಣೆಗೆ ದಿನಗಣನೆ ಆರಂಭವಾಗಿದ್ದು, ಗಣೇಶ ಮೂರ್ತಿಯ ಖರೀದಿಯ ಭರಾಟೆ ನಾಡಿನೆಲ್ಲೆಡೆ ಶುರುವಾಗಿದೆ. ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂಜಿಸಲು ಸಾಕಷ್ಟು ಜಾಗೃತಿಯನ್ನು ಮಾಡಲಾಗುತ್ತಿದೆ. ಈ ನಡುವೆ ರೈತರೊಬ್ಬರ ಪರಂಗಿ ಮರದಲ್ಲಿ ಮೋದಕವನ್ನು ಹೋಲುವ ಲಡ್ಡು ಗಾತ್ರದ ಪರಂಗಿ ಹಣ್ಣು ಬಿಟ್ಟು ಗಮನ ಸೆಳೆದಿದೆ.
ಗಣೇಶನಿಗೆ ಮೋದಕವೆಂದರೆ ಪಂಚಪ್ರಾಣ. ಸ್ವಾಭಾವಿಕವಾಗಿ ಮರದಲ್ಲೇ ಮೋದಕ ರೂಪದ ಹಣ್ಣು ದೊರೆತರೆ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಪಾರವೇ ಇಲ್ಲದಂತಾಗುತ್ತದೆ. ಗ್ರಾಮ್ ಲೆಕ್ಕದಲ್ಲಿರುವ ಪರಂಗಿಹಣ್ಣು ನೋಡಲು ಪುಟ್ಟದಾಗಿದೆ. ಅಂದರೆ, ನಿಂಬೆಯ ಹಣ್ಣು, ಲಡ್ಡು, ಮೋದಕದ ಗಾತ್ರದಲ್ಲಿದೆ.
ಪರಂಗಿಹಣ್ಣು ಒಂದು ರೂಪದಲ್ಲಿ ಗಜಮುಖದಂತೆ, ಮತ್ತೊಂದು ರೂಪದಲ್ಲಿ ಇಷ್ಟಲಿಂಗದಂತೆ, ಮಗದೊಂದು ರೂಪದಲ್ಲಿ ಮೋದಕದಂತೆ ಕಂಡುಬರುತ್ತದೆ. ಅಂದರೆ, ನೋಡುವವರ ದೃಷ್ಟಿಕೋನಕ್ಕೆ ತಕ್ಕಂತೆ ಕಂಡುಬರುತ್ತದೆ. ಆಸ್ತಿಕರಿಗೆ ದೈವೀ ಸ್ವರೂಪವಾದರೆ, ನಾಸ್ತಿಕರಿಗದು ಕೇವಲ ಪರಂಗಿ ಹಣ್ಣು ಮಾತ್ರ.
ಅಂದರೆ, ಚರಾಚರ ವಸ್ತುಗಳಲ್ಲಿ ದೇವರನ್ನು ಕಾಣುವ ಮನಸ್ಸುಳ್ಳವರಿಗೆ ಅದರ ಅರಿವಾಗುತ್ತದೆ. ನಿಸರ್ಗವನ್ನು ಅನಾದಿ ಕಾಲದಿಂದಲೂ ಆರಾಧಿಸುತ್ತಿರುವ ಪರಂಪರೆ ನಮದು. ಹಣ್ಣು, ತರಕಾರಿಗಳಲ್ಲಿ ವಿವಿಧ ಆಕಾರ, ಗಾತ್ರಗಳು ಕಂಡುಬಂದು ಆಗಾಗ್ಗೆ ಸುದ್ದಿಯಾಗುವುದು ಸಾಮಾನ್ಯ.ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಲಿಂಗೇಗೌಡನದೊಡ್ಡಿ ಗ್ರಾಮದ ಶಿವಣ್ಣ ಅವರ ತೋಟದಲ್ಲಿರುವ ಪರಂಗಿ ಮರದಲ್ಲಿ ಈ ಪುಟ್ಟ ಗಾತ್ರದ ಪರಂಗಿ ಹಣ್ಣು ಬಿಟ್ಟಿದೆ. ಆ ಮರದಲ್ಲಿ ಉಳಿದ ಕಾಯಿಗಳು ಸಹಜ ಗಾತ್ರವುಳ್ಳವಾಗಿವೆ.
ವಿಟಮಿನ್ ಸಿ ಹೊಂದಿರುವ ಪರಂಗಿ ಹಣ್ಣು ಜೀರ್ಣಕ್ರಿಯೆಗೆ ಪೂರಕವಾಗಿದೆ. ಹೀಗಾಗಿ ಈ ಹಣ್ಣು ಸೇವಿಸಲು ಸಲಹೆ ಮಾಡಲಾಗುತ್ತದೆ. ಎಲ್ಲ ಹಣ್ಣಿನಂತೆ ಪರಂಗಿ ಹಣ್ಣು ಕೂಡ ಎಲ್ಲರಿಗೂ ಆರೋಗ್ಯಕರವಲ್ಲ. ವಿರಳವಾಗಿ ಕೆಲವರಿಗೆ ವ್ಯತಿರಿಕ್ತ ಪರಿಣಾಮವನ್ನೂ ಉಂಟು ಮಾಡಬಹುದು. ವೈಜ್ಞಾನಿಕವಾಗಿ ಮನುಷ್ಯ ಎಷ್ಟೇ ಮುಂದುವರೆದರೂ ನಿಸರ್ಗದ ವೈಶಿಷ್ಟ್ಯವನ್ನು ಪೂರ್ಣವಾಗಿ ಅರಿಯಲು ಸಾಧ್ಯವಾಗಿಲ್ಲ.
ಆಗಾಗ್ಗೆ ಪ್ರಕೃತಿಯು ಮಾನವನ ಬುದ್ಧಿಶಕ್ತಿಯನ್ನು ಚಿಂತೆಗೀಡು ಮಾಡುತ್ತದೆ. ನಮಗೆ ತಿಳಿಯದ ಅದೆಷ್ಟೋ ನಿಗೂಢ ಸತ್ಯಗಳು ನಿಸರ್ಗದ ಒಡಲಲ್ಲಿ ಅಡಗಿವೆ.ಪ್ರಕೃತಿ ನಿತ್ಯವೂ ನಮಗೆ ಪಾಠ ಕಲಿಸುತ್ತಿರುತ್ತದೆ. ಆದರೆ, ಅದನ್ನು ನಾವು ಕಲಿತು ಅನುಷ್ಠಾನಕ್ಕೆ ತರಬೇಕು ಅಷ್ಟೇ. ಅಂದರೆ ನಿಸರ್ಗದ ವೈಶಿಷ್ಟ್ಯವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ನಿರಂತರವಾಗಿರಬೇಕು.
