Homeರಾಜ್ಯ101 ಬರಪೀಡಿತ ತಾಲೂಕುಗಳಲ್ಲಿ ಸುಮಾರು 18 ಸಾವಿರ ಕೋಟಿ ನಷ್ಟ : ಸಚಿವ ಪರಮೇಶ್ವರ್‌

101 ಬರಪೀಡಿತ ತಾಲೂಕುಗಳಲ್ಲಿ ಸುಮಾರು 18 ಸಾವಿರ ಕೋಟಿ ನಷ್ಟ : ಸಚಿವ ಪರಮೇಶ್ವರ್‌

ಬೆಂಗಳೂರು,ಸೆ.22- ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬರದ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ ಘೋಷಿಸಿರುವ 101 ಬರಪೀಡಿತ ತಾಲೂಕುಗಳಲ್ಲಿ ಸುಮಾರು 18 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್‌ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಹಂತ ಹಂತವಾಗಿ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ಮುಂದುವರಿದಿದ್ದು, ಇಂದು 53 ತಾಲೂಕುಗಳನ್ನು ಹೆಚ್ಚುವರಿಯಾಗಿ ಘೋಷಿಸುವುದಾಗಿ ಸರ್ಕಾರ ತಿಳಿಸಿದೆ. ಇದರಿಂದ ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ ಸುಮಾರು 177ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

ವಿಧಾನಮಂಡಲದ ವಿಶೇಷ ಅಧಿವೇಶನದ ಅಂಗವಾಗಿ ನಡೆದ ಚರ್ಚೆಯಲ್ಲಿ ಬರ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಪರಮೇಶ್ವರ್‌, ಬರಪೀಡಿತ ತಾಲೂಕುಗಳ ಘೋಷಣೆಯನ್ನು ರಾಜಕೀಯ ಒತ್ತಡ ಅಥವಾ ಯಾವುದೇ ವ್ಯಕ್ತಿಯ ರಾಜೀನಾಮೆ ಬೆದರಿಕೆಯನ್ನು ಆಧರಿಸಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ 2020ರ ಬರ ನಿರ್ವಹಣಾ ಕೈಪಿಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳು, ಮಳೆ ಕೊರತೆ, ಒಣಹವೆಯ ಅವಧಿ, ಬಿತ್ತನೆ ಪ್ರಮಾಣ, ಬೆಳೆ ಪರಿಸ್ಥಿತಿ, ಮಣ್ಣಿನ ತೇವಾಂಶ, ಅಂತರ್ಜಲ ಹಾಗೂ ಜಲಾಶಯಗಳ ನೀರಿನ ಲಭ್ಯತೆ ಸೇರಿದಂತೆ ವೈಜ್ಞಾನಿಕ ಅಂಶಗಳ ಆಧಾರದ ಮೇಲೆಯೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ ಎಂದು ಹೇಳಿದರು.

101ರಿಂದ 124, ಇದೀಗ 177ರತ್ತ :
ಆಗಸ್ಟ್‌ನಲ್ಲಿ ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಅವುಗಳಲ್ಲಿ 89 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ಮತ್ತೊಂದು 23 ತಾಲ್ಲೂಕುಗಳನ್ನು ಸೇರಿಸಲಾಗಿದ್ದು, ಒಟ್ಟು ಸಂಖ್ಯೆ 124ಕ್ಕೆ ಏರಿದೆ. ಈ 23 ತಾಲ್ಲೂಕುಗಳ ಪೈಕಿ 21 ತೀವ್ರ ಹಾಗೂ ಎರಡು ಮಧ್ಯಮ ಬರಪೀಡಿತ ತಾಲ್ಲೂಕುಗಳಾಗಿವೆ.

ಇದೀಗ ಮೂರನೇ ಹಂತದ ಪರಿಶೀಲನೆ ಬಳಿಕ ಮತ್ತಷ್ಟು ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸುವುದಾಗಿ ಸರ್ಕಾರ ತಿಳಿಸಿದೆ. ಸೆಪ್ಟೆಂಬರ್‌ 20ರ ವೇಳೆಗೆ ಪರಮೇಶ್ವರ್‌ ಅವರು ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲ್ಲೂಕುಗಳು ಅಂತಿಮವಾಗಿ ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಹೀಗಾಗಿ ಇಂದಿನ ಘೋಷಣೆ ಅಂತಿಮ ಪಟ್ಟಿಯಾಗದೆ, ಬರದ ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ಹಂತಗಳಲ್ಲೂ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ.

18 ಸಾವಿರ ಕೋಟಿ ನಷ್ಟದ ವರದಿ :
ಮೊದಲ ಹಂತದಲ್ಲಿ ಬರಪೀಡಿತ ಎಂದು ಗುರುತಿಸಲಾದ 101 ತಾಲ್ಲೂಕುಗಳಲ್ಲಿ ಬೆಳೆ ಹಾಗೂ ಸಂಬಂಧಿತ ಆರ್ಥಿಕ ನಷ್ಟವನ್ನು ಸುಮಾರು 18 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಈ ಆಧಾರದ ಮೇಲೆ ಕೇಂದ್ರದಿಂದ ಸುಮಾರು 3,500 ಕೋಟಿ ಪರಿಹಾರ ಕೋರಿ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಮುಂದಿನ ಹಂತಗಳಲ್ಲಿ ಸೇರ್ಪಡೆಯಾಗುವ ತಾಲೂಕುಗಳ ನಷ್ಟದ ವಿವರಗಳನ್ನು ಒಳಗೊಂಡಂತೆ ಹೆಚ್ಚುವರಿ ಮನವಿಗಳನ್ನು ಸಲ್ಲಿಸುವುದಾಗಿ ಸರ್ಕಾರ ಈಗಾಗಲೇ ತಿಳಿಸಿದೆ.

ಹಿಂದಿನ ಬರದ ಸಂದರ್ಭದಲ್ಲೂ ಕರ್ನಾಟಕವು ದೊಡ್ಡ ಪ್ರಮಾಣದ ಪರಿಹಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದ ನೆರವು ದೊರೆಯಲಿಲ್ಲ ಎಂದು ಪರಮೇಶ್ವರ್‌ ವಿಧಾನ ಪರಿಷತ್‌ನಲ್ಲಿ ನೆನಪಿಸಿದರು. ಹಿಂದಿನ ಬಾರಿ ರಾಜ್ಯವು ಸುಮಾರು 39 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿ 18 ಸಾವಿರ ಕೋಟಿ ರೂ. ಪರಿಹಾರ ಕೇಳಿದ್ದರೂ, ಸುಮಾರು 3,400, 3,500 ಕೋಟಿ ರೂ. ಮಾತ್ರ ದೊರೆತಿತ್ತು ಎಂದು ಸರ್ಕಾರದ ಹೇಳಿಕೆಗಳನ್ನು ವರದಿಗಳು ದಾಖಲಿಸಿವೆ.

ರಾಜೀನಾಮೆ ಬೆದರಿಕೆಗೆ ತಾಲೂಕು ಘೋಷಣೆ ಸಾಧ್ಯವಿಲ್ಲ :
ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಗದಗ ಸೇರಿಸಲಾಯಿತೇ ಎಂಬ ಪ್ರಶ್ನೆಯನ್ನು ಬಿಜೆಪಿ ಸದಸ್ಯ ಸಿ.ಟಿ.ರವಿ ಎತ್ತಿದರು. ಹೊಸ ಪಟ್ಟಿಯಲ್ಲಿ ಗದಗವೂ ಸೇರುವುದಾಗಿ ಪರಮೇಶ್ವರ್‌ ಉತ್ತರಿಸಿದರು. ಇದೇ ವೇಳೆ, ಕೆಲವರು ತಮ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳುತ್ತಿರುವ ಹಿನ್ನೆಲೆಯಲ್ಲಿ, ರಾಜೀನಾಮೆ ಒತ್ತಡಕ್ಕೆ ಮಣಿದು ಬರ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದರು. ಕೇಂದ್ರದಿಂದ ಪರಿಹಾರ ಕೇಳುವ ವಿಚಾರದಲ್ಲೂ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.

RELATED ARTICLES
spot_img

Latest News