ಬೆಂಗಳೂರು, ಸೆ.22- ರಾಜ್ಯದ 7 ಜಿಲ್ಲೆಗಳ 500 ಕೆರೆಗಳ ಪುನಶ್ಚೇತನಕ್ಕೆ ವಿಶ್ವಬ್ಯಾಂಕ್ ನೆರವಿನಡಿ 150 ಕೋಟಿ ರೂ. ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದು, ಸಮರೋಪಾದಿಯಲ್ಲಿ ಕೆರೆ ಅಭಿವೃದ್ಧಿ ಮಾಡುವಂತೆ ಸಂಬಂಧಿತ ಸಿಇಓಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.
ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ವಿಕಾಸಸೌಧದ ತಮ ಕಚೇರಿಯಲ್ಲಿ ಎಲ್ಲ ಜಿಲ್ಲೆಗಳ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಬೆಂಗಳೂರು ನಗರ, ಗ್ರಾಮಾಂತರದ 135 ಕೆರೆಗಳಿಗೂ ಬರಲಿದೆ ಜೀವಕಳೆ ಬರಲಿದೆ. 7 ಜಿಲ್ಲೆಗಳ 500 ಕೆರೆ ಪುನಶ್ಚೇತನಕ್ಕೆ 150 ಕೋಟಿ ರೂ. ಸಮಗ್ರ ಯೋಜನಾ ವರದಿ ಸಿದ್ದವಾಗಿದೆ ಎಂದರು.
ವಿಶ್ವಬ್ಯಾಂಕ್ ಯೋಜನೆಯಡಿ ಬೆಂಗಳೂರು ಗ್ರಾಮಾಂತರ -68, ಬೆಂಗಳೂರು ನಗರ -67, ಬೀದರ್-44, ಚಿಕ್ಕಬಳ್ಳಾಪುರ -90, ಕಲ್ಬುರ್ಗಿ-49, ತುಮಕೂರು -96 ಮತ್ತು ಕೋಲಾರ ಜಿಲ್ಲೆಯ-86 ಕೆರೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿರುವುದನ್ನು ಸಿಇಓಗಳು ಮತ್ತು ಪಿಡಿಓಗಳು ಖಚಿತಪಡಿಸಿಕೊಳ್ಳಬೇಕು. ನಿಯಮಿತವಾಗಿ ನೀರಿನ ಪರೀಕ್ಷೆ ಮಾಡಬೇಕು. ಕಲುಷಿತ ನೀರಿನ ದೂರು ಬಂದರೆ ಕೂಡಲೇ ಜಲ ಮೂಲದಿಂದ ಹಿಡಿದು ಮನೆಯ ನಲ್ಲಿಯವರೆಗೆ ಪ್ರತಿಯೊಂದು ಹಂತದಲ್ಲೂ ಪರಿಶೀಲನೆ ನಡೆಸಿ, ತ್ಯಾಜ್ಯ ನೀರು ಸೇರದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಬೆಂಗಳೂರು, ಬೆಳವಾವಿ, ಉತ್ತರ ಕನ್ನಡ, ಧಾರವಾಡ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಬಿಜಿ ರಾಮ್ ಜಿ ಅಡಿ ಮಾನವ ದಿನ ಸೃಜನೆ ಕಡಿಮೆ ಪ್ರಮಾಣದಲ್ಲಿದೆ. ಪ್ರಸ್ತುತ ರಾಜ್ಯ ವಸತಿ ಯೋಜನೆಗಳನ್ನೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಗೆ ಸೇರಿಸಿರುವ ಹಿನ್ನೆಲೆಯಲ್ಲಿ ಎಲ್ಲ ನಗರ ಪಟ್ಟಣದಲ್ಲೂ ಉದ್ಯೋಗ ನೀಡಲು ಅವಕಾಶವಿದೆ. ಇದನ್ನು ಬಳಸಿಕೊಂಡು ರಾಜ್ಯದ ಯಾವುದೇ ಭಾಗದಿಂದ ಯಾರೊಬ್ಬರೂ ಗುಳೆ ಹೋಗದಂತೆ ತಡೆಯಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
15 ದಿನದೊಳಗೆ ಕೂಲಿ ಹಣ ಪಾವತಿಸಿ:
ವಿಬಿಜಿ ರಾಮ್ ಜಿ ಅಡಿ ಕೆಲಸ ಮಾಡಿದ ಕಾರ್ಮಿಕರಿಗೆ ತಿಂಗಳಾದರೂ ಕೂಲಿ ಹಣ ಪಾವತಿಸದಿದ್ದರೆ ಅವರು ಕೆಲಸಕ್ಕೆ ಬರುವುದಿಲ್ಲ, ಆಗ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. 15 ದಿನಗಳ ಒಳಗಾಗಿ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಬೇಕು. ಸಿಇಓಗಳು ಪಿಡಿಓಗಳಿಗೆ ಮತ್ತು ಖಜಾನೆ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ತಿಳಿಸಿದರು. ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ ಸೇರಿದಂತೆ ಹಿರಿಯ ಅಧಿಕಾರಿಗಳು, ಸಿಇಓಗಳು ಸಭೆಯಲ್ಲಿ ಭಾಗಿಯಾಗಿದ್ದರು.
