Homeರಾಜ್ಯದೆಹಲಿಯಲ್ಲಿ ನಡೆದ ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರ ಸಭೆ ಯಶಸ್ವಿಯಾಗಿದೆ : ಸಿಎಂ ಡಿಕೆಶಿ

ದೆಹಲಿಯಲ್ಲಿ ನಡೆದ ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರ ಸಭೆ ಯಶಸ್ವಿಯಾಗಿದೆ : ಸಿಎಂ ಡಿಕೆಶಿ

ಬೆಂಗಳೂರು, ಜು.28- ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಅನುಗುಣವಾಗಿ ದೆಹಲಿಯಲ್ಲಿ ನಡೆದ ಕರ್ನಾಟಕವನ್ನು ಪ್ರತಿನಿಧಿಸುವ ಸಂಸದ ಸಭೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಪ್ರಯತ್ನಂ ಸರ್ವತ್ರ ಸಾಧನಂ ಎಂಬಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿಯಲ್ಲಿ ನಿನ್ನೆ ಕರೆದಿದ್ದ ಕರ್ನಾಟಕ ಸಂಸದರ ಸಭೆ ಅಭೂತ ಪೂರ್ವ ಯಶಸ್ಸು ಕಂಡಿದೆ. ಸಭೆಯಲ್ಲಿ ಹಾಜರಿದ್ದ ಪ್ರತಿಕ್ಷದವರು ಕೂಡ ಸಭೆಯ ಧ್ಯೇಯೋದ್ದೇಶ, ಸರ್ವರನ್ನೂ ಒಳಗೊಳ್ಳುವ ಮುಖ್ಯಮಂತ್ರಿಯವರ ನಡೆ ಬಗ್ಗೆ ಶ್ಲಾಘನೆ ಮಾಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಮುಖಂಡರೂ ಆಗಿರುವ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ಜಗದೀಶ್‌ ಶೆಟ್ಟರ್‌, ವಿ.ಸೋಮಣ್ಣ, ಬಸವರಾಜ ಬೊಮಾಯಿ ಅವರಿಂದ ಹಿಡಿದು ರಾಜ್ಯಸಭೆ ಸದಸ್ಯೆ ಶ್ರೀಮತಿ ಸುಧಾ ಮೂರ್ತಿವರೆಗೂ ಹಿಂದೆಂದೂ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ಇದೇ ಮೊದಲು ಎಂದು ಕೊಂಡಾಡಲಾಗಿದೆ.

ಇಷ್ಟೊಂದು ಅಚ್ಚುಕಟ್ಟಾಗಿ ಸಭೆ ಆಯೋಜನೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿನಂದನಾರ್ಹರು ಎಂದೂ ಸಭೆಯಲ್ಲಿ ಹೊಗಳಲಾಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರಲಾಯಿತು.

ಕರ್ನಾಟಕದ ಅಭಿವೃದ್ಧಿ ವಿಚಾರ ಬಂದಾಗ ಪಕ್ಷಬೇಧ ಮರೆತು ಒಟ್ಟಿಗೆ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿಯವರ ಮಾತಿಗೆ ಎಲ್ಲರೂ ಧ್ವನಿಗೂಡಿಸಿದರು. ಕೇಂದ್ರದ ಮುಂದೆ ಬಾಕಿ ಇರುವ ಯೋಜನೆಗಳು, ಬಿಡುಗಡೆ ಆಗಬೇಕಾದ ಅನುದಾನ, ಬರ ಪರಿಸ್ಥಿತಿ ನಿರ್ವಹಣೆ ನೆರವು-ಮತ್ತಿತರ ವಿಚಾರಗಳ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಪ್ರಸ್ತಾಪಕ್ಕೆ ಸಕಾರಾತಕ ಸ್ಪಂದನೆ ದೊರೆತಿದೆ.

ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಲೋಕಸಭೆ ಸದಸ್ಯರಾದ ಬಸವರಾಜ್‌ ಬೊಮಾಯಿ, ಜಗದೀಶ್‌ ಶೆಟ್ಟರ್‌, ಪಿ.ಸಿ.ಗದ್ದಿಗೌಡರ, ರಮೇಶ್‌ ಜಿಗಜಣಗಿ, ಸಾಗರ್‌ ಖಂಡ್ರೆ, ಡಾ. ಮಂಜುನಾಥ್‌, ಇ.ತುಕಾರಾಮ್‌‍, ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್‌, ಗೋವಿಂದ ಕಾರಜೋಳ, ಡಾ. ಸುಧಾಕರ್‌, ಸುನಿಲ್‌ ಬೋಸ್‌‍, ಪ್ರಿಯಾಂಕ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ್‌, ರಾಧಾಕೃಷ್ಣ, ಶ್ರೇಯಸ್‌‍ ಪಟೇಲ್‌‍, ರಾಜಶೇಖರ ಹಿಟ್ನಾಳ್‌, ಮಲ್ಲೇಶ್‌ ಬಾಬು, ಬ್ರಿಜೇಶ್‌ ಚೌಟ, ಯಧುವೀರ್‌ ಒಡೆಯರ್‌, ಕುಮಾರ ನಾಯಕ್‌, ಬಿ ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯಸಭೆ ಸದಸ್ಯರಾದ ಸುಧಾ ಮೂರ್ತಿ, ಜೈರಾಮ್‌ ರಮೇಶ್‌, ಅಜಯ್‌ ಮಕೆನ್‌, ಜಿ.ಸಿ.ಚಂದ್ರಶೇಖರ, ಸೈಯದ್‌ ನಾಸಿರ್‌ ಹುಸೇನ್‌, ನಾರಾಯಣ ಭಂಡಗೆ, ಎಂ ನಾಗರಾಜ, ಮನ್ಸೂರ್‌ ಖಾನ್‌, ಪವನ್‌ ಖೇರಾ ಸಭೆಯಲ್ಲಿ ಭಾಗವಹಿದ್ದರು.

ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್‌, ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಜಗ್ಗೇಶ್‌, ಲೆಹರ್‌ ಸಿಂಗ್‌, ಡಾ. ವೀರೇಂದ್ರ ಹೆಗಡೆ ಅವರು ಅನ್ಯ ಕಾರ್ಯಗಳ ನಿಮಿತ್ತ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು.ಒಟ್ಟಾರೆ ಸಭೆ ಭರ್ಜರಿ ಯಶಸ್ಸು ಕಂಡಿದೆ ಎಂದು ತಿಳಿಸಲಾಗಿದೆ.

RELATED ARTICLES
spot_img

Latest News