ಬೆಂಗಳೂರು, ಆ.6- ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಣೆ ಮಾಡಬೇಕು. ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸಮರ್ಪಕ ತರಬೇತಿ ನೀಡದ ಕಾರಣ ರಾಜ್ಯದ ಹಲವು ಕಡೆ ತಾಂತ್ರಿಕ ಹಾಗೂ ಆಡಳಿತಾತಕ ಗೊಂದಲಗಳು ಉಂಟಾಗಿವೆ ಎಂದು ನೂತನ ಸಚಿವ ಮಾಗಡಿ ಬಾಲಕೃಷ್ಣ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್‌ಒಗಳಿಗೆ ಸಮರ್ಪಕ ತರಬೇತಿ ನೀಡಲಾಗಿಲ್ಲ. ಅನೇಕ ಕಡೆಗಳಲ್ಲಿ ಮಾಹಿತಿ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳೇ ಸ್ವತಃ ಕಲಿತು ಕೆಲಸ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಮತದಾನದ ಹಕ್ಕು ರಕ್ಷಣೆ ಆಗಬೇಕಾದರೆ ಎಸ್‌ಐಆರ್ ಪ್ರಕ್ರಿಯೆಯನ್ನು ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್‌ಐಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿಲ್ಲ. ದೇಶದ ವಿವಿಧ ರಾಜ್ಯಗಳಲ್ಲೂ ನಡೆದಿದೆ. ಆದರೆ ಕರ್ನಾಟಕದಲ್ಲಿ ಹಲವು ತಾಂತ್ರಿಕ ಹಾಗೂ ಪ್ರಾಯೋಗಿಕ ಸಮಸ್ಯೆಗಳು ಎದುರಾಗಿವೆ. ಆದ್ದರಿಂದ ಚುನಾವಣಾ ಆಯೋಗ ಈ ಪ್ರಕ್ರಿಯೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ವಿಚಾರವಾಗಿ ಬಿಜೆಪಿ ಪಾದಯಾತ್ರೆ ನಡೆಸುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ಶುಗರ್, ಬಿಪಿ ಜಾಸ್ತಿಯಾಗಿರಬಹುದು. ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಅಶೋಕ್, ನಿಖಿಲ್ ಸೇರಿದಂತೆ ಎಲ್ಲರೂ ಪಾದಯಾತ್ರೆ ಮಾಡಲಿ. ತಾವೇ ರೂಪಿಸಿದ ಯೋಜನೆ ವಿರುದ್ಧವೇ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅವರಿಗೆ ಶುಭವಾಗಲಿ, ವಾಕಿಂಗ್ ಮಾಡಿ ಆರೋಗ್ಯ ಸುಧಾರಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಮಾತನಾಡಿದ ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್, ಎಸ್‌ಐಆರ್ ಪ್ರಕ್ರಿಯೆಯಲ್ಲಿ ವ್ಯಾಪಕ ಗೊಂದಲ ಉಂಟಾಗಿದೆ ಎಂದು ಆರೋಪಿಸಿದರು.
ನಮ ಕುಣಿಗಲ್ ಕ್ಷೇತ್ರದಲ್ಲೇ ಸುಮಾರು 2.5 ಲಕ್ಷ ಮತದಾರರಿದ್ದಾರೆ. ಡಿಜಿಟಲ್ ದಾಖಲೆಯಲ್ಲಿ ಕೇವಲ 1.2 ಲಕ್ಷ ಮತದಾರರ ಮಾಹಿತಿ ಮಾತ್ರ ಇದೆ. ಸುಮಾರು 17 ಸಾವಿರ ಮತದಾರರ ವಿವರ ನ್ಯೂನತೆಯ ಪಟ್ಟಿಗೆ ಹೋಗಿದೆ. ಮತ್ತೊಂದು 17 ಸಾವಿರ ಮತದಾರರ ಮಾಹಿತಿ ಎಎಸ್‌ಡಿಡಿಒ ವಿಭಾಗಕ್ಕೆ ಹೋಗಿದೆ. ಸುಮಾರು 34 ಸಾವಿರ ಮತದಾರರ ಮಾಹಿತಿ ಗೊಂದಲದಲ್ಲಿದೆ. ಒಂದು ಕ್ಷೇತ್ರದಲ್ಲೇ ಇಷ್ಟೊಂದು ಸಮಸ್ಯೆ ಇದ್ದರೆ ರಾಜ್ಯದ ಸ್ಥಿತಿ ಏನಾಗಿರಬಹುದು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮತದಾರರ ಮಾಹಿತಿ ಅಲಭ್ಯ ಸ್ಥಿತಿಗೆ ಹೋಗಿದೆ. ಈ ಎಲ್ಲ ಗೊಂದಲಗಳನ್ನು ಚುನಾವಣಾ ಆಯೋಗ ತಕ್ಷಣ ಸರಿಪಡಿಸಬೇಕು. ಇಲ್ಲವಾದರೆ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು. ಮತದಾರರ ಮಾಹಿತಿ ದಾಖಲಿಸುವಲ್ಲಿ ಅನೇಕ ತಾಂತ್ರಿಕ ದೋಷಗಳಾಗಿವೆ ಎಂದು ಆರೋಪಿಸಿದ ಅವರು, ತಂದೆ-ತಾಯಿಯ ಹೆಸರು ದಾಖಲಿಸಬೇಕಾದಲ್ಲಿ ಚಿಕ್ಕಮ, ದೊಡ್ಡಮ ಸೇರಿದಂತೆ ಸಂಬಂಧವಿಲ್ಲದವರ ಹೆಸರುಗಳನ್ನು ದಾಖಲಿಸಲಾಗುತ್ತಿದೆ. ಶಿವಮೊಗ್ಗದಲ್ಲಿರುವ ವ್ಯಕ್ತಿಯ ಹೆಸರು ಕುಣಿಗಲ್ ಕ್ಷೇತ್ರದಲ್ಲಿ ಕಾಣಿಸುತ್ತಿದೆ. ಇಂತಹ ತಾಂತ್ರಿಕ ದೋಷಗಳಿಂದ ಸಾಮಾನ್ಯ ಜನರಲ್ಲಿ ಚುನಾವಣಾ ಆಯೋಗದ ಮೇಲೆಯೇ ಅನುಮಾನ ಮೂಡಿದೆ ಎಂದು ಹೇಳಿದರು.
ಅನೇಕ ಮತದಾರರಿಗೆ ಎನ್ಯೂಮರೇಷನ್ ಫಾರಂ ತಲುಪಿಲ್ಲ. ಕೆಲವರಿಗೆ ಫಾರಂ ಸಿಕ್ಕರೂ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಲಾಜಿಕಲ್ ಡಿಸ್ಟರ್ಬೆನ್ಸ್ ಸರಿಪಡಿಸಲು ಕನಿಷ್ಠ 10 ದಿನಗಳ ಕಾಲಾವಕಾಶ ನೀಡಬೇಕು, ಎಂದು ಅವರು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ಎಸ್‌ಐಆರ್ ಹೆಸರಿನಲ್ಲಿ ರಾಜ್ಯದ ಸುಮಾರು ಶೇ. 20ರಷ್ಟು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ. ನಾವು ಮತದಾರರ ಪಟ್ಟಿಯ ಪರಿಷ್ಕರಣೆಗೆ ವಿರೋಧಿಗಳಲ್ಲ. ಆದರೆ ನೈಜ ಮತದಾರರನ್ನು ಕೈಬಿಡುವ ಪ್ರಕ್ರಿಯೆಗೆ ವಿರೋಧಿಸುತ್ತಿದ್ದೇವೆ ಎಂದರು.
ಈ ಕುರಿತು ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿ, ನೈಜ ಮತದಾರರ ಹೆಸರನ್ನು ಕೈಬಿಡದಂತೆ ಮನವಿ ಮಾಡಿದ್ದೇವೆ. ಆದರೆ ನಮ ಸಲಹೆಗಳನ್ನು ಪರಿಗಣಿಸಲಾಗುತ್ತಿಲ್ಲ. ಚುನಾವಣಾ ಆಯೋಗ ನೀಡುತ್ತಿರುವ ಅಂಕಿಅಂಶಗಳಲ್ಲೇ ಗೊಂದಲಗಳಿವೆ ಎಂದು ಆರೋಪಿಸಿದರು.
ಸತ್ತವರ ಹೆಸರುಗಳನ್ನು ಕೈಬಿಡುವುದಕ್ಕೆ ನಮ ವಿರೋಧವಿಲ್ಲ. ಆದರೆ ಮದುವೆಯಾಗಿ ಬೇರೆ ಊರಿಗೆ ತೆರಳಿರುವ ಮಹಿಳೆಯರು, ಬೇರೆ ಜಿಲ್ಲೆ ಅಥವಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿರುವ ಮತದಾರರ ಹೆಸರನ್ನೂ ಕೈಬಿಡುವ ಪ್ರಯತ್ನ ನಡೆಯುತ್ತಿದೆ. ಅವರು ಕೂಡ ಕರ್ನಾಟಕದ ಮತದಾರರೇ ಎಂದು ಹೇಳಿದರು.
2002ರ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಹಲವು ಮತದಾರರ ಹೆಸರನ್ನು ಕೈಬಿಡಲಾಗುತ್ತಿದೆ. ಆಗ ಅಸ್ತಿತ್ವದಲ್ಲೇ ಇಲ್ಲದ ಕ್ಷೇತ್ರಗಳ ಹೆಸರಿನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ರಾಜ್ಯ ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ ರಮೇಶ್ ಬಾಬು, ರಾಜ್ಯದಲ್ಲಿ ಸಿಟಿಜನ್‌ಶಿಪ್ ಸಮಸ್ಯೆಯೇ ಇಲ್ಲ. ಆದರೂ ಸುಮಾರು ಶೇ.20 ರಷ್ಟು ಮತದಾರರ ಹೆಸರನ್ನು ತೆಗೆದು ಹಾಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಸೂಚನೆಯಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ ಎಂಬ ಅನುಮಾನ ಮೂಡಿದೆ ಎಂದು ಹೇಳಿದರು.
