ಬೆಂಗಳೂರು,ಸೆ.22- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ದುರ್ಬಲಗೊಳ್ಳುವ ಸಾಧ್ಯತೆ ಇದ್ದು, ನಾಳೆಯಿಂದ ಮಳೆ ಪ್ರಮಾಣ ಕಡಿಮೆಯಾಗಲಿದೆ.ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ. ನಿನ್ನೆ ಮಧ್ಯಾಹ್ನದಿಂದ ರಾತ್ರಿಯವರೆಗೂ ಹಲವೆಡೆ ಮಳೆಯಾಗಿದೆ. ಕೆಲವೆಡೆ ಭಾರೀ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಬೆಂಗಳೂರು ನಗರದಲ್ಲಿ ನಿನ್ನೆ ಮಧ್ಯಾಹ್ನ ಹಾಗೂ ರಾತ್ರಿ ಹಲವೆಡೆ ಉತ್ತಮ ಮಳೆಯಾಗಿದೆ. ಹೆಸರುಘಟ್ಟ 60 ಮಿ.ಮೀ, ಯಲಹಂಕ 45.6 ಮಿ.ಮೀ, ಮಂಡ್ಯದ ಬೆಳ್ಳೂರು 37.4 ಮಿ.ಮೀ, ಬಳ್ಳಾರಿ 36 ಮಿ.ಮೀ, ಕೂಡ್ಲಗಿ 34.6 ಮಿ.ಮೀ, ವೈ.ಎಂ.ಹೊಸಕೋಟೆ 34 ಮಿ.ಮೀ, ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ 83.2 ಮಿ.ಮೀ, ವಿಜಯಪುರ ಜಿಲ್ಲೆಯ ಇಂಡಿ 60 ಮಿ.ಮೀ, ಕೊಪ್ಪಳ ಜಿಲ್ಲೆಯ ಕುಪ್ಪನೂರು 47 ಮಿ.ಮೀ, ಸಿಂಧನೂರು ಮತ್ತು ಶೇಡ್‌ಬಾಳ್ ತಲಾ 62.2 ಮಿ.ಮೀ.ನಷ್ಟು ಮಳೆಯಾಗಿದೆ.
ಉಳಿದಂತೆ ದಕ್ಷಿಣ ಕನ್ನಡ, ಕಲಬುರ್ಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೀದರ್, ಬಳ್ಳಾರಿ, ಚಿತ್ರದುರ್ಗ, ಕೊಡಗು, ಚಾಮರಾಜನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ರಾಯಚೂರು, ಬೆಳಗಾವಿ, ಗದಗ, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಗದಗ, ಮಂಡ್ಯ, ಬೆಂಗಳೂರು ದಕ್ಷಿಣ ಜಿಲ್ಲೆಗಳು ಸೇರಿದಂತೆ ಹಲವೆಡೆ ಹಗರುದಿಂದ ಸಾಧಾರಣ ಮಳೆಯಾಗಿದೆ.
ಹವಾ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬರದಿಂದ ಕೆಂಗೆಟ್ಟಿದ್ದ ರಾಜ್ಯದಲ್ಲಿ ಅಲ್ಲಲ್ಲಿ ಬೀಳುತ್ತಿರುವ ಮಳೆ ತುಸು ಸಮಾಧಾನ ತಂದಿದ್ದು, ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಂಧ್ರಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾದ ದಕ್ಷಿಣ ಕರಾವಳಿ ಕಡೆಗೆ ಚಲಿಸುತ್ತಿದ್ದು, ನಾಳೆ ಬೆಳಗ್ಗೆ ವೇಳೆಗೆ ಅದು ದುರ್ಬಲಗೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಯುಭಾರ ಕುಸಿತದ ನೇರ ಪರಿಣಾಮ ರಾಜ್ಯದ ಮೇಲಾಗದಿದ್ದರೂ ಅದರ ಪ್ರಭಾವದಿಂದ ಮೋಸ ಮುಸುಕಿದ ವಾತಾವರಣ, ಅಲ್ಲಲ್ಲಿ ಹಗರುದಿಂದ ಸಾಧಾರಣ ಮಳೆ ಇಂದು ಮತ್ತೆ ನಾಳೆ ಮುಂದುವರೆಯುವ ಸಾಧ್ಯತೆಗಳು ಕಂಡುಬರುತ್ತಿವೆ.
