Homeರಾಜ್ಯಇಂದಿನಿಂದ ರಾಜ್ಯದಲ್ಲಿ 4 ದಿನ ಸಾಧಾರಣ ಮಳೆ ಸಾಧ್ಯತೆ

ಇಂದಿನಿಂದ ರಾಜ್ಯದಲ್ಲಿ 4 ದಿನ ಸಾಧಾರಣ ಮಳೆ ಸಾಧ್ಯತೆ

ಬೆಂಗಳೂರು,ಅ.14-ನೈರುತ್ಯ ಮುಂಗಾರು ಮರಳುವಿಕೆ ಹಾಗೂ ಈಶಾನ್ಯ ಹಿಂಗಾರು ಮಳೆ ಪ್ರಾರಂಭಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದ್ದು, ಇಂದಿನಿಂದ ಅ.19ರವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಗಳಿವೆ. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆ ನಿರೀಕ್ಷಿಸಬಹುದಾಗಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದಿಂದಲೂ ಒಣಹವೆ ಮುಂದುವರೆದಿದ್ದು, ಬರದ ತೀವ್ರತೆ ಹೆಚ್ಚಾಗಿದೆ. ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಕೆಲವೆಡೆ ಮಾತ್ರ ಮಳೆಯಾಗುತ್ತಿದೆ. ಆಗಾಗ್ಗೆ ತಂಪಾದ ಹಾಗೂ ಬಲವಾದ ಮೇಲೈ ಗಾಳಿ ಬೀಸುತ್ತಿದೆ. ನಾಳೆಯಿಂದ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಅಲ್ಲಲ್ಲಿ ಚದುರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಗಳಿವೆ.

ಕರಾವಳಿ, ಮಲೆನಾಡು. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ವ್ಯಾಪಕ ಹಾಗೂ ಭಾರಿ ಮಳೆಯಾಗುವ ಲಕ್ಷಣಗಳಿಲ್ಲ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ.

ಅ.16ರಿಂದ ಮೂರು ದಿನಗಳ ಕಾಲ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಲವಾದ ಮೇಲೈ ಗಾಳಿ ಗಂಟೆಗೆ 40 ಕಿ.ಮೀ.ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಾಳೆ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಅ.16ರಂದು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ. ಅ.17 ಮತ್ತು 18 ರಂದು ರಾಜ್ಯಾದ್ಯಂತ ಮಳೆ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಿನಂತೆಯೇ ಅಕ್ಟೋಬರ್‌ ತಿಂಗಳಿನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ರೈತರು ಮಳೆಯನ್ನೇ ಎದುರು ನೋಡುವಂತಾಗಿದೆ. ಸದ್ಯದಲ್ಲೇ ಉತ್ತಮ ಮಳೆಯಾಗದಿದ್ದರೆ ಬೆಳೆ ರೈತರ ಕೈ ಸೇರುವುದು ಕಷ್ಟ. ಬರದ ಬವಣೆ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ.

RELATED ARTICLES
spot_img

Latest News