Homeರಾಜ್ಯಖಾತೆ ಬಗ್ಗೆ ಅಸಮಾಧಾನ ಇಲ್ಲ : ಕೃಷ್ಣಭೈರೇಗೌಡ

ಖಾತೆ ಬಗ್ಗೆ ಅಸಮಾಧಾನ ಇಲ್ಲ : ಕೃಷ್ಣಭೈರೇಗೌಡ

No dissatisfaction with the account: Krishna Bhairegowda

ಬೆಂಗಳೂರು, ಜೂ.13- ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಖಾತೆಯ ಬಗ್ಗೆ ತಮಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಜವಾಬ್ದಾರಿ ಹಂಚಿಕೆಯಲ್ಲಿ ಸ್ಪಷ್ಟತೆ ಇರಬೇಕೆಂದು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಸಚಿವ ಕೃಷ್ಣಭೈರೇ ಗೌಡ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜನ, ಪಕ್ಷ ಹಾಗೂ ಮುಖ್ಯಮಂತ್ರಿಯವರ ನಿರೀಕ್ಷೆ ಅಪಾರವಾಗಿದೆ. ನಿರೀಕ್ಷೆಗಳಿಗೆ ತಕ್ಕ ಹಾಗೇ ಜನಪರವಾದ ಸುಧಾರಣೆಯಾಗಬೇಕಾದರೆ, ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಅಗತ್ಯ ಇದೆ ಎಂದು ಹೇಳಿದ್ದಾರೆ.

ತಾವು ಯಾವುದೇ ಜವಾಬ್ದಾರಿ ತೆಗೆದುಕೊಂಡರು ಅದಕ್ಕೆ ಉತ್ತಮ ಫಲಿತಾಂಶ ನೀಡುವ ಉತ್ತರದಾಹಿತ್ವವನ್ನು ರೂಢಿಸಿಕೊಂಡು ಬಂದಿದ್ದೇನೆ. ನನಗೆ ಯಾವುದೇ ರೀತಿಯ ಅಸಮಾಧಾನಗಳಿಲ್ಲ, ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಎಂಬುವುದು ಅಧಿಕಾರವಲ್ಲ ಕಠಿಣ ಸವಾಲಿನ ಜವಾಬ್ದಾರಿ ಎಂದರು.

ಬಿಡಿಎ ಮತ್ತು ಬಿಎಂಆರ್‌ಡಿಎ ಹೊರತಾದ ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡಿದ್ದೇನೆ. ಸಂಪೂರ್ಣವಾದ ಮತ್ತು ಸ್ಪಷ್ಟವಾದ ಜವಾಬ್ದಾರಿ ಇದ್ದರೆ, ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ಇಲ್ಲವಾದರೆ ನಿರೀಕ್ಷಿತ ಹಾಗೂ ಫಲಿತಾಂಶ ಆಧರಿತವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಶೀಘ್ರವೇ ತೀರ್ಮಾನ ಮಾಡುತ್ತೇನೆ.

ಅವರ ನಿರ್ಧಾರದ ಬಳಿಕ ಮುಂದಿನ ಕೆಲಸಗಳನ್ನು ನಿರ್ವಹಿಸುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿಯವರು ದೆಹಲಿಯಲ್ಲಿ ನಿರಂತರವಾದ ಸಭೆಗಳನ್ನು ನಡೆಸಿದ್ದರು. ನಾನೂ ಕೂಡ ಅವರೊಂದಿಗೆ ಕೆಲ ಸಭೆಗಳಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದರು.

ಗೊಂದಲ:
ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿಯ ಖಾತೆ ತಮಗೆ ಬೇಕು ಎಂದು ಹಿರಿಯ ಸಚಿವ ರಾಮಲಿಂಗಾರೆಡ್ಡಿ ಪಟ್ಟುಹಿಡಿದಿದ್ದಾರೆ. ಕೃಷ್ಣಭೈರೇಗೌಡ ಅವರಿಗೆ ಬಿಎಂಆರ್‌ಡಿಎ ಮತ್ತು ಬಿಡಿಎ ಹೊರತಾದ ಖಾತೆಗಳನ್ನು ನೀಡಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ತಮ ಬಳಿಯೇ ಇರಲಿದೆಯೇ? ಅಥವಾ ಬದಲಾವಣೆ ಮಾಡಲಾಗಿದೆಯೇ? ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೃಷ್ಣಭೈರೇಗೌಡ ಅವರು ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ.

ಒಂದು ವೇಳೆ ಇದೇ ಖಾತೆಯಲ್ಲಿ ಮುಂದುವರೆಯಬೇಕು ಎಂದಾದರೆ, ತಮಗೆ ಬಿಡಿಎ ಹಾಗೂ ಬಿಎಂಆರ್‌ಡಿಎ ಖಾತೆ ಸಹಿತವಾಗಿ ಜವಾಬ್ದಾರಿ ನೀಡಬೇಕೆಂದು ಕೃಷ್ಣಭೈರೇಗೌಡ ಪಟ್ಟುಹಿಡಿದಿರುವುದಾಗಿ ತಿಳಿದು ಬಂದಿದೆ.

ರಾಮಲಿಂಗಾರೆಡ್ಡಿಯವರ ಮನವೊಲಿಸುವ ಪ್ರಯತ್ನಗಳು ನಡೆದಿದ್ದು, ಹೈಕಮಾಂಡ್‌ ಕೂಡ ಈ ವಿಚಾರವಾಗಿ ಮಧ್ಯಪ್ರವೇಶಿಸಿದೆ ಎನ್ನಲಾಗಿದೆ. ಒಂದೆರಡು ದಿನಗಳಲ್ಲಿ ಸ್ಪಷ್ಟತೆಯೊಂದಿಗೆ ಈ ಬಗ್ಗೆ ನಿರ್ಧಾರ ತಿಳಿಸುವುದಾಗಿ ಮುಖ್ಯಮಂತ್ರಿಯವರು ಹೇಳಿರುವುದಾಗಿ ತಿಳಿದು ಬಂದಿದೆ.

RELATED ARTICLES
spot_img

Latest News