Tuesday, April 21, 2026
Homeರಾಜ್ಯಖಮೇನಿ ಹತ್ಯೆ ಖಂಡಿಸಿ ರಾಜ್ಯದಲ್ಲಿ ಪೂರ್ವಾನುಮತಿಯಿಲ್ಲದೆ ಪ್ರತಿಭಟನೆ ಮಾಡುವಂತಿಲ್ಲ : ಗೃಹ ಸಚಿವ ಪರಮೇಶ್ವರ್‌

ಖಮೇನಿ ಹತ್ಯೆ ಖಂಡಿಸಿ ರಾಜ್ಯದಲ್ಲಿ ಪೂರ್ವಾನುಮತಿಯಿಲ್ಲದೆ ಪ್ರತಿಭಟನೆ ಮಾಡುವಂತಿಲ್ಲ : ಗೃಹ ಸಚಿವ ಪರಮೇಶ್ವರ್‌

No protests in the state against Khamenei's assassination without prior permission

ಬೆಂಗಳೂರು, ಮಾ.4- ಇರಾನ್‌ನ ಅಧ್ಯಕ್ಷ ಆಯತೊಲ್ಲಾ ಆಲಿ ಖಮೇನಿ ಹತ್ಯೆಯನ್ನು ಖಂಡಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೂರ್ವಾನುಮತಿಯಿಲ್ಲದೆ ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತಕ್ರಮ ಕೈ ಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ಒಂದು ವರ್ಗ ಖಮೇನಿ ಅವರನ್ನು ತಮ ಧರ್ಮ ಗುರು ಎಂದು ಭಾವಿಸಿದೆ. ಹತ್ಯೆಯನ್ನು ಖಂಡಿಸಿ ಮೆರವಣಿಗೆ ನಡೆಸಲು ಯಾರೂ ಅನುಮತಿ ಕೇಳಿರಲಿಲ್ಲ, ನಾವು ಅನುಮತಿ ಕೊಟ್ಟಿರಲಿಲ್ಲ. ಆದರೂ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ ಎಂದರು.

ಹೈಕೋರ್ಟ್‌ ಆದೇಶದ ಪ್ರಕಾರ ಫ್ರೀಡಂಪಾರ್ಕ್‌ನಲ್ಲೇ ಪ್ರತಿಭಟನೆ ನಡೆಯಬೇಕು. ಅದರಂತೆ ಈ ಹಿಂದೆ ಕಾಂಗ್ರೆಸ್‌‍ ಪಕ್ಷವೂ ಮತಗಳ್ಳತನದ ವಿರುದ್ಧ ಹಾಗೂ ಉದ್ಯೋಗಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದಾಗ ಆಕ್ಷೇಪಿಸಿ ಪ್ರತಿಭಟನೆ ನಡೆಸಿತ್ತು. ಆದರೆ ಫ್ರೀಡಂಪಾರ್ಕ್‌ ಅನ್ನು ಬಿಟ್ಟು ಹೊರೆಗೆ ಪ್ರತಿಭಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದೆವು. ಏಕಾಏಕಿ ಬೀದಿಗೆ ಬಂದು ಪ್ರತಿಭಟನೆ ಮಾಡುವುದು ನಿಯಮ ಬಾಹಿರ. ಇದರ ವಿರುದ್ಧ ದೂರು ಸ್ವೀಕರಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ದಕ್ಷಿಣ ಭಾರತದಲ್ಲಿನ ರಾಜ್ಯಗಳ ಮೇಲಾಗುತ್ತಿರುವ ತಾರತಮ್ಯವನ್ನು ವಿರೋಧಿಸಲು ಒಗ್ಗಟ್ಟು ಪ್ರದರ್ಶನವಾಗಬೇಕೆಂದು ಮೊದಲಿನಿಂದಲೂ ಕೇಳಿ ಬರುತ್ತಿರುವ ಬೇಡಿಕೆಯಾಗಿದೆ. ಕೇಂದ್ರ ಸರ್ಕಾರ ಜಿಎಸ್‌‍ಟಿ ತೆರಿಗೆಯಲ್ಲೂ ನಮಗೆ ನ್ಯಾಯೋಚಿತ ಪಾಲು ನೀಡುತ್ತಿಲ್ಲ. ದೊಡ್ಡ ಯೋಜನೆಗಳನ್ನೆಲ್ಲಾ ಉತ್ತರ ಭಾರತದ ರಾಜ್ಯಗಳಲ್ಲಿಯೇ ಆರಂಭಿಸಲಾಗುತ್ತಿದೆೆ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಸಂಘಟನಾತಕವಾಗಿ ಮುಂದಡಿ ಇಡಬೇಕೆಂದು ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್‌ ಬರೆದಿರುವ ಪತ್ರ ಸಮರ್ಥನೀಯ ಎಂದರು.

ಒಳ ಮೀಸಲಾತಿ ಜಾರಿಯಾಗಬೇಕು ಎಂಬ ಬೇಡಿಕೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಪರಮೇಶ್ವರ್‌ ಚುಟುಕ್ಕಾಗಿ ಉತ್ತರಿಸಿದರು.ರಾಜ್ಯ ರಾಜಕಾರಣದಲ್ಲಿ 1952ರಿಂದಲೂ ವ್ಯತ್ಯಾಸಗಳು ಇದ್ದೇ ಇವೆ. ಚುನಾವಣೆ ಆರಂಭವಾದಾಗಿನಿಂದಲೂ ನಾನಾ ರೀತಿಯ ಬೆಳವಣಿಗೆಗಳು, ಭಿನ್ನಾಭಿಪ್ರಾಯಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಇದರ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಬಹಳಷ್ಟು ಸಂದರ್ಭಗಳಲ್ಲಿ ಭೋಜನಾಕೂಟ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 6 ವರ್ಷ ಪಕ್ಷವನ್ನು ಮುನ್ನಡೆಸಿದ್ದಕ್ಕಾಗಿ ಕಾಂಗ್ರೆಸ್‌‍ನ ಸಚಿವರಿಗೆ, ಶಾಸಕರಿಗೆ ಔತಣಕೂಟ ಆಯೋಜಿಸಿದ್ದಾರೆ. 6 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಡಿ.ಕೆ.ಶಿವಕುಮಾರ್‌ ಕೃತಜ್ಞತೆ ಹೇಳಲು ಔತಣಕೂಟಕ್ಕೆ ಕರೆದಿರಬಹುದು ಎಂದು ಸಮರ್ಥಿಸಿಕೊಂಡರು.

ರಾಜಕಾರಣದಲ್ಲಿ ಹೊಸ ನಾಯಕತ್ವ ಬರಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿರುವುದು ಸಮರ್ಥನೀಯವಾಗಿದೆ. ಇದು ಮೊದಲಿನಿಂದಲೂ ನಡೆದು ಬಂದಿರುವ ಸಂಪ್ರದಾಯ ಎಂದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿ ನಡೆಸಲು ನ್ಯಾಯಮೂರ್ತಿ ಮೈಕೆಲ್‌ ಡಿ.ಕುನ್ಹಾ ಅವರ ಸಮಿತಿ ಶಿಫಾರಸು ಆಧರಿಸಿ ಷರತ್ತುಗಳನ್ನು ವಿಧಿಸಲಾಗಿತ್ತು.

ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಹಾಗೂ ಅದರ ಬೆಂಬಲಿತ ಸಂಘಟನೆಗಳು ಷರತ್ತುಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತಿವೆ. ಈ ತಿಂಗಳಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿದ್ದು ಆ ವೇಳೆ ಎಲ್ಲಾ ಸಿದ್ಧತೆಗಳಾಗಬಹುದು ಎಂದು ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರನ್ನು ಸಾಲದ ರಾಮಯ್ಯ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ನಮ ರಾಜ್ಯ ಆರ್ಥಿಕ ಶಿಸ್ತಿನಲ್ಲಿದೆ. ಜಿಡಿಪಿಎಸ್‌‍ನ ಶೇ.25ರ ಮಿತಿಯ ಒಳಗೆ ಸಾಲದ ಪ್ರಮಾಣ ಇರಬೇಕು. ನಾವು ಅದನ್ನು ಪಾಲನೆ ಮಾಡಿದ್ದೇವೆ ಎಂದು ಹೇಳಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿಯೇ ನಮದು ಕಡಿಮೆ ಸಾಲ ಮಾಡಿರುವ ರಾಜ್ಯ. ಮಹಾರಾಷ್ಟ್ರ ಸರ್ಕಾರ 9.5ಲಕ್ಷ ಕೋಟಿ ರೂ. ಸಾಲ ಮಾಡಿದೆ. ಬಿಜೆಪಿಯವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇದ್ದಂತಿಲ್ಲ ಎಂದರು.

ಫೋನ್‌ ಟ್ಯಾಪಿಂಗ್‌ ಬಗ್ಗೆ ಆರೋಪ ಮಾಡುವ ವಿರೋಧ ಪಕ್ಷದ ನಾಯಕರು ನಿರ್ಧಿಷ್ಟವಾದ ಪ್ರಕರಣಗಳನ್ನು ತಿಳಿಸಬೇಕು. ಗಾಳಿಯಲ್ಲಿ ಗುಂಡು ಹೊಡೆಯುವಂತಹ ಮಾತುಗಳನ್ನಾಡುವ ಬದಲಾಗಿ ಯಾರಿಗೆ ಯಾವ ಸಂದರ್ಭದಲ್ಲಿ ಫೋನ್‌ ಟ್ಯಾಪ್‌ ಅಗಿದೆ ಎಂದು ನಿರ್ಧಿಷ್ಟವಾಗಿ ಹೇಳಬೇಕು. ನಮ ಸರ್ಕಾರವಂತೂ ಯಾವ ಫೋನ್‌ ಟ್ಯಾಪಿಂಗ್‌ ನಡೆಸಿಲ್ಲ ಎಂದು ಪರಮೇಶ್ವರ್‌ ಸ್ಪಷ್ಟ ಪಡಿಸಿದರು.

ದುಬೈ ಸೇರಿದಂತೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗ ಮತ್ತು ಪ್ರವಾಸಕ್ಕಾಗಿ ಸುಮಾರು 10 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ನೆಲೆಸಿರುವ ಮಾಹಿತಿ ಇದೆ. ಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧದ ಪರಿಣಾಮವಾಗಿ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಈಗಾಗಲೇ ಎರಡು ವಿಮಾನಗಳಲ್ಲಿ ಭಾರತೀಯರನ್ನು ಕರೆ ತರಲಾಗಿದೆ. ಸ್ಥಳಾಂತರ ಪ್ರಕ್ರಿಯೆಗಳು ಮುಂದುವರೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈ ನಿಟ್ಟಿನಲ್ಲಿ ಒತ್ತಡ ಹೇರಿದ್ದರು ಎಂದು ಸರಿಸಿಕೊಂಡರು.

RELATED ARTICLES

Latest News