ಬೆಂಗಳೂರು,ಅ.14- ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಲೂರು ಬಿಜೆಪಿ ಮುಖಂಡ ಮೃತಪಟ್ಟಿರುವ ಘಟನೆ ದೇವನ ಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಮಾಲೂರು ತಾಲ್ಲೂಕಿನ ಮಾದನಹಟ್ಟಿ ಗ್ರಾಮದ ನಿವಾಸಿ ಶಿವಕುಮಾರ್ (36) ಮೃತಪಟ್ಟವರು. ಇವರು ರಿಯಲ್ಎಸ್ಟೇಟ್ ನಡೆಸುತ್ತಿದ್ದರು. ಜೊತೆಗೆ ಡೆವಲಪರ್ ಆಗಿದ್ದ ಅವರು ಮೊಣಕಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ನಿನ್ನೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿವಕುಮಾರ್ ಅವರು ನಿನ್ನೆ ಬೆಳಗ್ಗೆ ಮಾಲೂರಿನಿಂದ ತಮ ರೇಜ್ ರೋವರ್ ಕಾರಿನಲ್ಲಿ ಚಾಲಕ ಪವನ್ ಹಾಗೂ ಕಚೇರಿಯ ಆಫೀಸ್ ಬಾಯ್ಗಳಾದ ಪ್ರದೀಪ ,ವಿನೋದ್ಕುಮಾರ್ ಹಾಗೂ ಪಿಎ ಚಂದನ್ನೊಂದಿಗೆ ಹೋಗಿದ್ದಾರೆ.
ಕಾರ್ಯಕ್ರಮ ಮುಗಿಸಿಕೊಂಡು ಸಂಜೆ 4.30 ರ ಸುಮಾರಿನಲ್ಲಿ ಚಿತ್ರದುರ್ಗದಿಂದ ವಾಪಸ್ ಮಾಲೂರಿಗೆ ಹಿಂದಿರುಗುತ್ತಿದ್ದರು. ಶಿವಕುಮಾರ್ ಅವರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದರೆ, ಪ್ರದೀಪ್, ಚಂದನ್ ಹಾಗೂ ವಿನೋದ್ಕುಮಾರ್ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು.
ಇವರ ಕಾರು ಚಿತ್ರದುರ್ಗದಿಂದ ದಾಬಸ್ಪೇಟೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 648 ಮೂಲಕ ದೇವನಹಳ್ಳಿ ಬಳಿಯ ಹೊಸಕೋಟೆ-ದಾಬಸ್ಪೇಟೆ ರಿಂಗ್ ರಸ್ತೆಯ ಮುತ್ತಪ್ಪ ರೈ ಲೇಔಟ್ ಸಮೀಪ ರಾತ್ರಿ 7.30 ರ ಸುಮಾರಿನಲ್ಲಿ ಬರುತ್ತಿದ್ದಂತೆ ಕಾರು ಚಾಲನೆ ಮಾಡುತ್ತಿದ್ದ ಪವನ್ ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್ಟೇಕ್ ಮಾಡಲು ಮುಂದಾಗಿದ್ದಾನೆ.
ಆ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 3ನೇ ಪಥದಲ್ಲಿ ಯಾವುದೇ ಪಾರ್ಕಿಂಗ್ ಲೈಟ್ ಹಾಕದೆ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದೆ.ಪರಿಣಾಮ ಶಿವಕುಮಾರ್ ಅವರ ಮುಖ,ಕುತ್ತಿಗೆ,ಎದೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವವಾಗಿದೆ.
ತಕ್ಷಣ ಸಾರ್ವಜನಿಕರು ನೆರವಿಗೆ ದಾವಿಸಿ ಶಿವಕುಮಾರ್ ಅವರನ್ನು ಕಾರಿನಿಂದ ಹೊರಗೆ ಕರೆತಂದು ಉಪಚರಿಸಿ ನಂತರ ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಕಾರಿನಲ್ಲಿದ್ದ ಚಾಲಕ ಹಾಗೂ ಇನ್ನುಳಿದ ಮೂವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸುದ್ದಿ ತಿಳಿದು ದೇವನಹಳ್ಳಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಚಾಲಕನ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದಾರೆ.
