ಬೆಂಗಳೂರು, ಮಾ.8- ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಯ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ ಮಾಡುವಂತೆ ಪೋಷಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದೆ.
2026-27ನೇ ಸಾಲಿನ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ಪ್ರವೇಶ ಪಡೆಯಬೇಕಾದರೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವಿದೆ.2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ, ಒಂದನೇ ತರಗತಿಗೆ 6 ವರ್ಷ ವಯೋಮಿತಿ ನಿಗದಿಯಾಗಿದೆ. ಆದರೆ ಸುಮಾರು 2.30 ಲಕ್ಷ ಮಕ್ಕಳು ಕೆಲವೇ ದಿನಗಳ ಅಂತರದಲ್ಲಿ 6 ವರ್ಷದ ವಯೋಮಿತಿಯನ್ನು ತಲುಪಲು ಸಾಧ್ಯವಾಗದೆ ಪ್ರವೇಶ ವಂಚಿತರಾಗುತ್ತಿದ್ದಾರೆ.
ಕಸ್ತೂರಿ ನಗರದ ಅಮೋಘವರ್ಷ ಎಂಬ ವಿದ್ಯಾರ್ಥಿ ಕೇವಲ 15 ದಿನಗಳ ಕಡಿಮೆ ಅಂತರದಲ್ಲಿ ವಯೋಮಿತಿ ಸಾಲದೆ ಅವಕಾಶ ವಂಚಿತನಾಗುತ್ತಿದ್ದಾನೆ. ಈಗಾಗಲೇ ಯುಕೆಜಿ ಪೂರ್ಣಗೊಳಿಸಿರುವ ಆತ ತಮ ಸ್ನೇಹಿತರ ಜೊತೆಯಲ್ಲೇ ಒಂದನೇ ತರಗತಿಗೆ ದಾಖಲಾಗಲು ಬಯಸುತ್ತಿದ್ದಾನೆ. ಆದರೆ ನಿಯಮದ ಪ್ರಕಾರ ಆತನಿಗೆ ಪ್ರವೇಶ ಸಿಗುತ್ತಿಲ್ಲ.
ಹೀಗಾಗಿ ಮನೆಯಲ್ಲಿ ಅಳುತ್ತಾ ಕುಳಿತಿದ್ದಾನೆ. ಸ್ನೇಹಿತರ ಜೊತೆ ಒಂದನೇ ತರಗತಿಗೆ ಶಾಲೆ ಸೇರಿಕೊಳ್ಳಬೇಕು ಎಂಬ ಆತನ ಬಯಕೆ. ಅವಕಾಶ ಸಿಗದೇ ಇದ್ದರೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಆತನ ತಾಯಿ ಮನವಿ ಮಾಡಿಕೊಂಡಿದ್ದಾರೆ.
ಇದೇ ರೀತಿ ರಾಜ್ಯದಲ್ಲಿ ಸುಮಾರು ಲಕ್ಷಾಂತರ ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರ ಪೋಷಕರು ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಕಳೆದ ವರ್ಷ ಇದೇ ರೀತಿಯ ಸಮಸ್ಯೆ ಎದುರಾದಾಗ ಸರ್ಕಾರ ಮಧ್ಯ ಪ್ರವೇಶ ಮಾಡಿ ವಯೋಮಿತಿಯನ್ನು 5 ವರ್ಷ 5 ತಿಂಗಳಿಗೆ ಇಳಿಕೆ ಮಾಡಿತ್ತು. ಈ ನಿರ್ಧಾರ 2025-26ನೇ ಸಾಲಿಗೆ ಮಾತ್ರ ಸೀಮಿತವಾಗಿರಲಿದೆ. ಮುಂದಿನ ವರ್ಷದಿಂದ ಯಾವುದೇ ರೀತಿಯಲ್ಲೂ ವಯೋಮಿತಿ ಸಡಿಲಿಕೆ ನೀಡುವುದಿಲ್ಲ ಎಂದು ಮಧುಬಂಗಾರಪ್ಪ ಆಗಲೇ ಸ್ಪಷ್ಟವಾಗಿ ಹೇಳಿದ್ದರು.
ಆದರೆ ಈಗ ಅದೇ ಬೇಡಿಕೆ ಮತ್ತೆ ಉದ್ಭವಗೊಂಡಿದೆ. ಪೋಷಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕನಿಷ್ಠ ಮೂರು ತಿಂಗಳ ವಯೋಮಿತಿ ಸಡಿಲಿಕೆ ನೀಡುವಂತೆ ಮನವಿ ಮಾಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ವಯೋಮಿತಿ ಪಾಲನೆ ಕಡ್ಡಾಯವಾಗಿದೆ. ಈ ನಿಯಮ ಮೀರಿದರೆ ಬೇರೆ ಬೇರೆ ಕಾರಣಗಳಿಗೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗಬಹುದು ಎಂಬ ಆತಂಕ ಇದೆ. ಈ ನಿಟ್ಟಿನಲ್ಲಿ ಸರ್ಕಾರ ವಯೋಮಿತಿ ಸಡಿಲಿಕೆಗೆ ಹಿಂದೇಟು ಹಾಕುತ್ತಿದೆ, ಆದರೆ ಪೋಷಕರು ಮಕ್ಕಳ ಹಿತದೃಷ್ಟಿಯಿಂದ ನಿಯಮ ಸಡಿಲಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ.ಸರ್ಕಾರ ಯಾವ ರೀತಿಯ ನಿರ್ಣಯ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
