Homeರಾಜ್ಯಗೃಹಲಕ್ಷ್ಮಿ-ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಸಲು ಸಿಎಂ ಡಿ.ಕೆ.ಶಿವಕುಮಾರ್‌ ಆದೇಶ : ಜನರ ಆಕ್ರೋಶ

ಗೃಹಲಕ್ಷ್ಮಿ-ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಸಲು ಸಿಎಂ ಡಿ.ಕೆ.ಶಿವಕುಮಾರ್‌ ಆದೇಶ : ಜನರ ಆಕ್ರೋಶ

People's anger over CM D.K. Shivakumar's order to re-apply for Grihalakshmi-Griha Jyoti scheme

ಬೆಂಗಳೂರು, ಜೂ. 14- ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಆದೇಶ ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಯೋಜನೆಗಳಲ್ಲಿ ದುರುಪಯೋಗವಾಗುತ್ತಿದೆ ಎಂಬ ನೆಪ ಹೇಳಿ ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚಲು ಸರ್ಕಾರ ಮುಂದಾಗಿದೆ. ಯೋಜನೆಯ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ನೇತೃತ್ವದ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ವೇತನ, ಸಿಬ್ಬಂದಿ, ಭತ್ಯೆ ಹಾಗೂ ವಾಹನ ಸೌಕರ್ಯ ಸೇರಿ ಸುಮಾರು 500 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ವ್ಯಯಮಾಡಲಾಗಿದೆ.

ಈ ಸಮಿತಿಗಳು ಯಾವ ಸಾಧನೆ ಮಾಡಿವೆ, ಯಾವ ಕಾರಣಕ್ಕಾಗಿ ಅನುಷ್ಠಾನದಲ್ಲಿವೆ ಎಂಬುದೇ ಜನಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಬಡವರ ಮನೆಗೆ 2 ಸಾವಿರ ರೂ. ತಲುಪುವುದನ್ನು ದುರುಪಯೋಗವಾಗುತ್ತಿದೆ ಎಂದು ಪರಿಷ್ಕರಣೆ ಮಾಡಲಾಗುತ್ತಿದೆ. ಅದೇ ವೇಳೆ ಲಕ್ಷಾಂತರ ರೂ.ಗಳನ್ನು ಗ್ಯಾರಂಟಿ ಸಮಿತಿಗಳಿಗೆ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ವೇತನ ರೂಪದಲ್ಲಿ ಪಾವತಿಸಲಾಗುತ್ತಿದೆ.

ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಲಕ್ಷಾಂತರ ರೂ. ನೀಡಲಾಗಿದೆ. 5 ಮಂದಿ ಉಪಾಧ್ಯಕ್ಷರನ್ನು ನಿಯೋಜಿಸಿ ಅವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಜಿಲ್ಲಾ ಸಮಿತಿ ಹಾಗೂ ಬೆಂಗಳೂರು ನಗರದಲ್ಲಿನ ಸಮಿತಿ ಅಧ್ಯಕ್ಷರಿಗೆ 40 ಸಾವಿರ ರೂ. ಮಾಸಿಕ ವೇತನ. ತಾಲ್ಲೂಕು ಮಟ್ಟದ ಸಮಿತಿಯ ಅಧ್ಯಕ್ಷರಿಗೆ ತಿಂಗಳಿಗೆ 25 ಸಾವಿರ ರೂ. ವೇತನ ಹಾಗೂ ಭತ್ಯೆಗಳನ್ನು ನೀಡಲಾಗುತ್ತಿದೆ.

ಇದು ದುರುಪಯೋಗವಲ್ಲವೇ? ಪ್ರಶ್ನೆಯನ್ನು ಜನ ಸಾಮಾನ್ಯರು ಕೇಳಲಾರಂಬಿಸಿದ್ದಾರೆ. ಒಂದು ವೇಳೆ ಮೃತಪಟ್ಟವರ ಹೆಸರಿಗೆ 130 ಕೋಟಿ ರೂ. ಸಂದಾಯವಾಗಿದೆ ಎನ್ನುವುದೇ ಆಗಿದ್ದರೆ ಅದನ್ನು ಇಷ್ಟು ದಿನ ಏಕೆ ಪತ್ತೆ ಹಚ್ಚಲಾಗಿಲ್ಲ. ಗ್ಯಾರಂಟಿ ಸಮಿತಿಗಳು ಏನು ಕೆಲಸ ಮಾಡುತ್ತಿದ್ದವು ಎಂಬ ಮೂಲಭೂತ ಪ್ರಶ್ನೆ ಕಾಡಲಾರಂಭಿಸುತ್ತದೆ.

ರಾಜಕೀಯ ಕಾರಣಕ್ಕಾಗಿ ಅಥವಾ ಪಕ್ಷದ ಪದಾಧಿಕಾರಿಗಳಿಗೆ ಪುನರ್‌ ವಸತಿ ಕಲ್ಪಿಸಲು ರಚಿಸಲಾಗಿರುವ ಈ ಸಮಿತಿಗಳು ಬಿಟ್ಟಿ ಸಂಬಳ ಪಡೆದು ಕಾಲಾಹರಣ ಮಾಡುತ್ತಿವೆಯೇ ಎಂಬ ಅನುಮಾನ ಮೂಡಿದೆ.

ತಾಲ್ಲೂಕು ಮಟ್ಟದಲ್ಲಿ ಇರುವ ಸಮಿತಿಗಳು ತೀವ್ರ ನಿಗಾ ವಹಿಸಿದ್ದರೆ, ಅನರ್ಹರು ಮತ್ತು ಮೃತಪಟ್ಟವರ ಖಾತೆಗಳಿಗೆ ಹಣ ಸಂದಾಯವಾಗುವುದು ತಪ್ಪಿ, 130 ಕೋಟಿ ರೂ. ಉಳಿಯುತ್ತಿತ್ತಲ್ಲವೇ ಎಂಬ ಚರ್ಚೆ ಆರಂಭವಾಗಿವೆ. ಒಂದೆಡೆ ಗ್ಯಾರಂಟಿ ಸಮಿತಿಗಳಿಗೆ ವಾರ್ಷಿಕವಾಗಿ 500 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ವೇತನ ಹಾಗೂ ಇತರೆ ಭತ್ಯೆಯ ರೂಪದಲ್ಲಿ ಸಂದಾಯವಾಗುತ್ತಿದೆ.

ಮತ್ತೊಂದೆಡೆ ಅನರ್ಹ ಫಲಾನುಭವಿಗಳ ಹೆಸರಿಗೆ 130 ಕೋಟಿ ರೂ. ಪಾವತಿಯಾಗಿದೆ. ಒಟ್ಟು ಸರಿ ಸುಮಾರು 630 ಕೋಟಿ ರೂ. ಜನರ ಹಣ ನೀರಿನಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಜನಗಣತಿಯ ಹೆಸರಿನಲ್ಲಿ ಸುಮಾರು 500 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.

ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಇದರ ನಡುವೆ ಈ ರೀತಿ ಅನಗತ್ಯವಾದ ದುಂದು ವೆಚ್ಚಗಳು ಬೊಕ್ಕಸಕ್ಕೆ ಮತ್ತಷ್ಟು ಹೊರೆಯಾಗುತ್ತಿದೆ. ಅನರ್ಹರಿಗೆ ಹಣ ಸಂದಾಯವಾಗಿದೆ ಎಂದು ನೆಪ ಹೇಳುತ್ತಾ ಈಗ ಮರು ಅರ್ಜಿ ಕರೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಪಡೆದು ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಮೊಬೈಲ್‌ ಸಂಖ್ಯೆಯ ಒಟಿಪಿ, ಆಧಾರ್‌ ಗುರುತಿನ ಸಂಯೋಜನೆ ಮೂಲಕ ಅನರ್ಹರರಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು.

ಮೃತಪಟ್ಟವರ ಮಾಹಿತಿ ಮತ್ತು ದಾಖಲಾತಿಗಳನ್ನು ಪಡೆದು ಕ್ರಮಬದ್ಧಗೊಳಿಸಿಕೊಳ್ಳುವುದು ಗ್ಯಾರಂಟಿ ಸಮಿತಿಗಳ ಜವಾಬ್ದಾರಿಯಾಗಿತ್ತು. ಆದರೆ ಅದನ್ನು ನಿರ್ವಹಿಸಲು ಸಮಿತಿಗಳು ಸಂಪೂರ್ಣ ವಿಫಲವಾಗಿವೆ. ಆರಂಭದಲ್ಲೇ ಗೃಹ ಲಕ್ಷ್ಮಿ ಫಲಾನುಭವಿಗಳು ತಮ ಆಧಾರ್‌ ಸಂಖ್ಯೆಗೆ ಜೋಡಿಸಿರುವ ಹಾಗೂ ತಮದೇ ಹೆಸರಿನಲ್ಲಿ ಪಡೆಯಲಾಗಿರುವ ಮೊಬೈಲ್‌ ನಂಬರ್‌ ಅನ್ನು ನೀಡಿದರೇ ಮಾತ್ರ ಯೋಜನೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂಬ ಕಠಿಣ ನಿಯಮ ರೂಪಿಸಲಾಗಿತ್ತು.

ಮನೆಯ ಯಜಮಾನೀಯರು ತಮ ಪತಿ ಅಥವಾ ಮಕ್ಕಳ ಫೋನ್‌ ನಂಬರ್‌ ಕೊಟ್ಟರೂ ಕೂಡ ಯೋಜನೆ ಫಲಾನುಭವಿಗಳಾಗಲು ಅವಕಾಶ ಇರಲಿಲ್ಲ. ಅಷ್ಟೆಲ್ಲಾ ಕಠಿಣ ನಿಯಮಗಳೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕಾಲಾನಂತರ ಕೆಲವರ ಫೋನ್‌ ನಂಬರ್‌ಗಳು ರೀಚಾರ್ಜ್‌ ಆಗದೆ ನಿಷ್ಕ್ರಿಯಗೊಂಡು ಬದಲಾವಣೆಯಾಗಿರುವ ಸಾಧ್ಯತೆಗಳಿವೆ. ಅದನ್ನು ಕ್ರಮಬದ್ಧಗೊಳಿಸುವ ಅವಕಾಶ ನೀಡುವ ಬದಲಾಗಿ ಹೊಸದಾಗಿಯೇ ಅರ್ಜಿ ಸಲ್ಲಿಸಬೇಕೆಂಬುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಗೃಹಜ್ಯೋತಿ ಯೋಜನೆಗೆ ಪ್ರತಿಯೊಬ್ಬ ಫಲಾನುಭವಿಯೂ ವಿದ್ಯುತ್‌ ಸಂಪರ್ಕದ ಖಾತೆ ಸಂಖ್ಯೆಗೆ ತಮ ಮೊಬೈಲ್‌ ನಂಬರನ್ನು ಒಟಿಪಿ ಮೂಲಕ ಜೋಡಣೆ ಮಾಡಿಕೊಂಡಿದ್ದಾರೆ. ಬೇರೆ ಕಡೆ ಮನೆ ಬದಲಾವಣೆ ಮಾಡಿದ್ದರೂ ಕೂಡ ಅಲ್ಲಿಯೂ ಮೀಟರ್‌ ಮೊಬೈಲ್‌ ನಂಬರ್‌ನ್ನು ಜೋಡಣೆ ಮಾಡಿಕೊಳ್ಳಬೇಕು. ಅದಾದ 6 ತಿಂಗಳ ಬಳಿಕ ಸರಾಸರಿ ಅಂದಾಜಿಸಿ ಯೋಜನೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಪ್ರತಿಯೊಂದನ್ನು ವೈಜ್ಞಾನಿಕವಾಗಿ ಲೆಕ್ಕಾಚಾರಗಳ ಮೂಲಕವೇ ಅನುಷ್ಠಾನ ಗೊಳಿಸಲಾಗಿದೆ.

ಈಗ ಖುದ್ದು ಮುಖ್ಯಮಂತ್ರಿಯವರೇ ಲೋಪಗಳಾಗಿವೆ ಎಂದು ಹೇಳುವ ಮೂಲಕ ತಮದೇ ಸರ್ಕಾರ ಜಾರಿಗೊಳಿಸಿದ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ.

ಆರ್ಥಿಕ ಉಳಿತಾಯಕ್ಕಾಗಿ ಮುಖ್ಯಮಂತ್ರಿಯವರು ಫಲಾನುಭವಿಗಳನ್ನು ಕಡಿತಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಲವಾರು ತೆರಿಗೆಗಳನ್ನು ಹೆಚ್ಚಳ ಮಾಡಿ ಜನರಿಗೆ ಹೊರೆ ಮಾಡಲಾಗಿದೆ. ಈಗ ಫಲಾನುಭವಿಗಳ ಸಂಖ್ಯೆಯನ್ನು ಕಡಿತ ಮಾಡಲು ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ. ರಾಜಕೀಯ ಕಾರಣಕ್ಕಾಗಿ ಜನ ಕೇಳದೇ ಇದ್ದರೂ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಈಗ ಅದನ್ನು ಬದಲಾವಣೆ ಮಾಡಲು ಮುಂದಾಗಿರುವುದು ಚರ್ಚೆ ಗ್ರಾಸವಾಗಿದೆ.

RELATED ARTICLES

Latest News