ತುಮಕೂರು,ಜೂ.29- ಭಗ್ನ ಪ್ರೀಮಿಯೊಬ್ಬ ಬಾಂಬ್ ಸೊ ೕಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದ್ದು, ನಾಡಬಾಂಬ್ ಸಿಕ್ಕಿದ್ದು ಎಲ್ಲಿ ಎನ್ನುವ ಚಿಂತೆ ಕಳ್ಳಂಬೆಳ್ಳ ಠಾಣೆ ಪೊಲೀಸರಿಗೆ ಶುರುವಾಗಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ನಾಗೇಂದ್ರನ ಪಾರ್ಥಿವ ಶರೀರ ಊರು ಸೇರಿದೆ. ಅತ್ತ ಪ್ರಿಯಕರನಿಂದ ದಾಳಿಗೆ ಒಳಗಾಗಿದ್ದ ಪ್ರಿಯತಮೆ ರವ್ಯಾ ಚಿಕಿತ್ಸೆ ಪಡೆದು ಮನೆ ಸೇರಿದ್ದಾಳೆ. ಈ ಮಧ್ಯೆ ಪೊಲೀಸರು ನಾಡಬಾಂಬ್ ಮೂಲ ಬೆನ್ನತ್ತಿದ್ದಾರೆ.ಭಗ್ನ ಪ್ರೀಮಿಯ ಆತ್ಮಾಹುತಿ ಪ್ರಕರಣ ಸಂಬಂ ಸಿದಂತೆ ಮತ್ತಷ್ಟು ಅಂಶಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ರವ್ಯಾಳನ್ನ ಪ್ರೆತಿಸುತ್ತಿದ್ದ ನಾಗೇಂದ್ರ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಬೆಂಗಳೂರಿಗೆ ಹೋಗಿದ್ದಾನೆ. ರವ್ಯಾ ತನ್ನಿಂದ ದೂರ ಆಗುತ್ತಾಳೆ ಎಂದು ನೊಂದ ನಾಗೇಂದ್ರ ಬಾಂಬ್ ಸ್ಪೋಟಿಸಿಕೊಂಡು ಇಬ್ಬರ ಪ್ರಾಣಹೋಗಲೆಂದೇ ಪ್ರಯತ್ನಿಸಿದ್ದ.
ಆದರೆ ಪ್ರಿಯತಮೆ ಬಚಾವ್ ಆದಳು. ಈತ ಮಾತ್ರ ಬಾಂಬಿನ ಬೆಂಕಿಯಲ್ಲಿ ಬೆಂದು ಹೋದ. ಈ ದುರಂತಕ್ಕೆ ಕಾರಣವಾಗಿದ್ದು ನಾಗೇಂದ್ರ ತಂದ ಆ ಮೂರು ಬಾಂಬ್. ನಾಗೇಂದ್ರನ ಬಳಿ ಬಾಂಬ್ ಇಲ್ಲದೇ ಇದ್ದರೆ ಆತ ಬದುಕಿರುತಿದ್ದ. ಮತ್ತೇ ಈ ಘಟನೆಯೇ ನಡೆಯುತ್ತಿರಲಿಲ್ಲ.
ನಾಗೇಂದ್ರ ಜೂ.25ರಂದೇ ಬೆಂಗಳೂರಿಗೆ ಹೋಗಿದ್ದಾನೆ. ರವ್ಯಾಳ ರೂಮಿಗೆ ಹೋಗಿ ಮದುವೆ ಆಗುವಂತೆ ಪೀಡಿಸಿದ್ದಾನೆ. ಒಂದು ವೇಳೆ ಮದುವೆ ಆಗದೇ ಇದ್ದರೆ ಇಬ್ಬರೂ ಜೀವ ಬಿಡೋಣ ಅಂದಿದ್ದನಂತೆ. ನಿನ್ನ ಸಾಯಿಸಿ ನಾನೂ ಸಾಯ್ತಿನಿ ಎಂದು ಬೆದರಿಕೆ ಹಾಕಿದ್ದ.
ಇದಕ್ಕೆಲ್ಲ ರವ್ಯಾ ಸೊಪ್ಪು ಹಾಕದಿದ್ದಾಗ ಮತ್ತೇ ಅಂಕೋಲಾಕ್ಕೆ ಹೋಗಿ 27ನೇ ತಾರೀಕಿನಂದು ಮೂರು ನಾಡಬಾಂಬ್ ತಂದಿದ್ದ. ಮೂರರಲ್ಲಿ ಎರಡು ಸ್ಟೋಟಗೊಂಡಿತ್ತು ಎನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಜೀವಂತವಾಗಿದ್ದ ಇನ್ನೊಂದು ಬಾಂಬನ್ನು ಪೊಲೀಸರು ನಿಷ್ಕೃಿಯಗೊಳಿಸಿದ್ದಾರೆ.
ಹಾಗಾದರೆ ಈ ಭಯಾನಕ ನಾಡಬಾಂಬ್ ನಾಗೇಂದ್ರನಿಗೆ ಸಿಕ್ಕಿದಾದರೂ ಹೇಗೆ ಅನ್ನೋ ಪ್ರಶ್ನೆ ಪೊಲೀಸರನ್ನು ಕಾಡ ತೊಡಗಿದೆ.
ಒಂದು ಮೂಲದ ಪ್ರಕಾರ ಉತ್ತರ ಕನ್ನಡದಿಂದಲೇ ಆತ ತಂದಿರುವ ಅನುಮಾನ ವ್ಯಕ್ತವಾಗಿದೆ. ಅಂಕೋಲಾ, ಯಲ್ಲಾಪುರ, ಹಳಿಯಾಳ, ದಾಂಡೇಲಿಯಿಂದ ಬಾಂಬ್ ತಂದಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ಕಾರಣ ಆ ಪ್ರದೇಶಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದು, ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲು ನಾಡಬಾಂಬ್ ಉಪಯೋಗಿಸುತ್ತಾರೆ. ಬಹುಶಃ ಈ ಪ್ರದೇಶದಿಂದಲೇ ಬಾಂಬ್ ತಂದಿರಬೇಕು ಅನ್ನೋ ಶಂಕೆ ಹುಟ್ಟಿದೆ.
ಅಂಕೋಲಾದಿಂದ ಒಟ್ಟು ಮೂರು ನಾಡಬಾಂಬ್ ತಂದಿದ್ದ ನಾಗೇಂದ್ರ ಒಂದು ಬಾಂಬ್‌ನ್ನು ಹೊರ ತೆಗೆಯುತ್ತಿದ್ದಂತೆಯೇ ಆತನ ಕೈಯಿಂದ ಚಾಲಕ ಪ್ರವೀಣ್ ಹೊರಗೆಸೆದಿದ್ದ. ಆಗ ತಕ್ಷಣ ಬ್ಯಾಗ್ ಒಳಗೆ ಕೈ ಹಾಕಿ ಮತ್ತೊಂದು ಬಾಂಬ್ ಅನ್ನು ನಾಗೇಂದ್ರ ಹೊರತೆಗೆದಿದ್ದಾನೆ.
ಒಂದು ಬಾಂಬ್‌ನ್ನು ಹೊರಗೆ ಎಸೆದ್ರೂ ಮತ್ತೆ ಎರಡು ಬಾಂಬ್‌ಗಳನ್ನ ನಾಗೇಂದ್ರನ ಬ್ಯಾಗ್‌ನಲ್ಲಿ ಗಮನಿಸಿದ ರವ್ಯಾ, ದಾರಿ ಕಾಣದೇ ಚಾಲಕ ಪ್ರವೀಣ್‌ಗೆ ಗಾಬರಿಯಿಂದ ಗಾಡಿಯಿಂದ ಇಳಿಯಿರಿ ಅಣ್ಣ ಬಾಂಬ್ ಇದೆ ಎಂದು ಕೂಗಿಕೊಂಡಿದ್ದಾಳೆ. ಇಬ್ಬರು ಇಳಿಯುತ್ತಿದ್ದಂತೆಯೇ ನಾಗೇಂದ್ರ ಬಾಂಬ್ ಸಿಡಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಒಂದು ವೇಳೆ ನಾಡ ಬಾಂಬ್ ಜನವಸತಿ ಪ್ರದೇಶದಲ್ಲಿ ಸ್ಪೋಟಿಸಿದ್ದರೇ ನೂರಾರು ಜನರ ಪ್ರಾಣ ಹೋಗುತ್ತಿತ್ತು.ಆದರೆ ಶಿರಾ ಬಳಿಯ ಹೈವೇಯಲ್ಲಿ ಸೊ ೕಟಿಸಿದ ಕಾರಣ ನಾಗೇಂದ್ರ ಮಾತ್ರ ಸಜೀವ ದಹನಗೊಂಡಿದ್ದಾನೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಳ್ಳಂಬೆಳ್ಳ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಾಡಬಾಂಬ್ ಮೂಲ ಬೆನ್ನತ್ತಿದ ಪೊಲೀಸರು ಅಂಕೋಲಾ ಪೊಲೀಸರ ಸಹಾಯ ಪಡೆದಿದ್ದಾರೆ. ವಶಕ್ಕೆ ಪಡೆದ ನಾಡಬಾಂಬ್‌ನ ಸ್ಯಾಂಪಲ್ಸ್‌ನ್ನು ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಎರಡೂ ಠಾಣೆಯ ಪೊಲೀಸರು ಜಂಟಿಯಾಗಿ ಬಾಂಬ್‌ನ ಮೂಲ ಕಂಡುಹಿಡಿಯಲು ಹೊರಟಿದ್ದಾರೆ.
