ಬಳ್ಳಾರಿ,ಜ.3- ವಾಲೀಕಿ ಪ್ರತಿಮೆ ಉದ್ಘಾಟನೆಗೂ ಮುನ್ನ ಫ್ಲೆಕ್ಸ್ ಅಳವಡಿಕೆ ಸಂಬಂಧ ಶಾಸಕರಾದ ನಾರಾ ಭರತರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಉಂಟಾದ ಗಲಭೆ ಸಹಜ ಸ್ಥಿತಿಗೆ ಬಂದಿದೆಯಾದರೂ ಪರಿಸ್ಥಿತಿ ಮಾತ್ರ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ.
ಕಳೆದ ಎರಡು ದಿನಗಳಿಂದ ಎರಡು ಪ್ರಬಲ ರಾಜಕೀಯ ಕುಟುಂಬಗಳ ಪ್ರತಿಷ್ಠೆಯಿಂದ ರಾಷ್ಟ್ರದ ಗಮನ ಸೆಳೆದಿದ್ದ ಬಳ್ಳಾರಿ ಸಂಪೂರ್ಣವಾಗಿ ಪೊಲೀಸರ ನಿಯಂತ್ರಣದಲ್ಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಪಗಾವಲು ಹಾಕಲಾಗಿದೆ.
ಆದರೆ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿಗೆ ಕಾರಣರಾದವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮತ್ತೊಂದೆಡೆ ಅಧಿಕಾರ ಸ್ವೀಕರಿಸಿದ ಕೇವಲ ಎರಡೇ ದಿನದಲ್ಲಿ ಸೇವೆಯಿಂದ ಅಮಾನತುಗೊಂಡ ಎಸ್ಪಿ ಪವನ್ ನೆಜ್ಜೂರು ಅವರನ್ನು ಸರ್ಕಾರ ಅಮಾನತುಗೊಳಿಸಿರುವುದಕ್ಕೂ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಗುರುವಾರವಷ್ಟೇ ಹಾಲಿ ಎಸ್ಪಿಯಾಗಿದ್ದ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದ ಪವನ್ ನೆಜ್ಜೂರು 48 ಗಂಟೆ ಕಳೆಯುವುದರೊಳಗೆ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದು ಮತ್ತು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿಡಲು ವಿಫಲರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರ ಅಮಾನತುಗೊಳಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಜಿಲ್ಲೆಯ ಎಸ್ಪಿಯವರು ಕನಿಷ್ಟ ಪಕ್ಷ ಆಯಾ ವ್ಯಾಪ್ತಿಯ ಠಾಣೆಗೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿಗತಿಗಳನ್ನು ಅರಿಯಲು ಒಂದು ವಾರದಿಂದ ಹತ್ತು ದಿನಗಳಾದರೂ ಬೇಕು. ಅಧಿಕಾರ ಸ್ವೀಕರಿಸಿದ ಎರಡು ದಿನದಲ್ಲಿ ಅವರನ್ನು ಅಮಾನತು ಮಾಡಿದ್ದು ತಂದೆ -ತಾಯಿ ಜಗಳದಲ್ಲಿ ಕೂಸು ಬಡವಾದಂತೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜನಾರ್ದನ ರೆಡ್ಡಿ ಮತ್ತು ನಾರಾ ಭರತರೆಡ್ಡಿ ನಡುವಿನ ರಾಜಕೀಯ ಸಮರದಲ್ಲಿ ಅನಾಯಾಸವಾಗಿ ಓರ್ವ ಐಪಿಎಸ್ ಅಧಿಕಾರಿಯನ್ನು ಅಮಾನತು ಮಾಡಿದ್ದು ಸರಿಯಲ್ಲ. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ಕ್ರಮ ಜರುಗಿಸಬೇಕು. ಜನಪ್ರತಿನಿಧಿಗಳಿಗೊಂದು ನ್ಯಾಯ, ಅಧಿಕಾರಿಗಳಿಗೊಂದು ನ್ಯಾಯವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಈ ನಡುವೆ, ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ, ಸಾರ್ವಜನಿಕ ಕ್ಷಮೆ ಯಾಚಿಸಿದ್ದಾರೆ. ಬಳ್ಳಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೇಸು ದಾಖಲಾಗಿದೆ. ರಾಜಕೀಯ ಮೇಲಾಟದ ಮಧ್ಯೆ, ವಾಲೀಕಿ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಲಾಗಿದೆ.
ಮುಂದುವರಿದ ಟ್ರಿಗ್ಗರ್ ರಹಸ್ಯ:
ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ, ಪೆಲೀಸರು ಗಾಳಿಯಲ್ಲಿ ಹಾರಿಸಿದ ಗುಂಡು ಕಾರಣವಲ್ಲ ಎನ್ನುವುದು ಸಾಬೀತಾಗಿದೆ. ಇದರ ಬೆನ್ನಲ್ಲೇ, ಎಸ್ಪಿಯನ್ನು ಅಮಾನತು ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬಳ್ಳಾರಿ ಗಲಾಟೆಗೆ ಸಂಬಂಧಿಸಿದಂತೆ, ಹಲವು ಆಯಾಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿಯ ನಾಯಕರು, ಇದಕ್ಕೆ ಶಾಸಕ ಭರತ್ ರೆಡ್ಡಿಯೇ ಕಾರಣ ಎಂದು ಆರೋಪಿಸಿದೆ. ನನ್ನನ್ನು ಕೊಲ್ಲುವುದೇ ಅವರ ಗುರಿಯಾಗಿತ್ತು ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪವನ್ನು ಮಾಡಿದ್ದಾರೆ.
ಜನಾರ್ದನ ರೆಡ್ಡಿಯವರ ನಿವಾಸವನ್ನು ಗುರಿಯಾಗಿಸಿ ಬಂದೂಕು :
ಒಂದು ವಿಡಿಯೋದಲ್ಲಿ ಜನಾರ್ದನ ರೆಡ್ಡಿಯವರ ನಿವಾಸವನ್ನು ಕಾರ್ಯಕರ್ತನೊಬ್ಬ ಗುರಿಯಾಗಿಸಿ ಬಂದೂಕು ಹಿಡಿದುಕೊಂಡಿದ್ದುದು ಸ್ಪಷ್ಟವಾಗಿ ಕಾಣಿಸುತ್ತಿದೆ. ನನ್ನಿಂದ ಏನಾದರೂ ತೊಂದರೆಯಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ನಾರಾ ಭರತ್ ರೆಡ್ಡಿ ಹೇಳಿದ್ದಾರೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಬಿಜೆಪಿ ಆಗ್ರಹಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಬಿ ವೈ ವಿಜಯೇಂದ್ರ ಆಸ್ಪತ್ರೆಯಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇದಾದ ನಂತರ, ಜನಾರ್ದನ ರೆಡ್ಡಿ ಮನೆಯ ಮುಂದೆಯೇ, ಮಾಧ್ಯಮದವರ ಮುಂದೆ ಮಾತುಕತೆ ನಡೆಸಿದ್ದಾರೆ.
ಖಾಸಗಿ ಅಂಗರಕ್ಷಕರ ಐದು ಬಂದೂಕು ವಶ :
ಈ ನಡುವೆ, ಮುಖಂಡರ ಖಾಸಗಿ ಅಂಗರಕ್ಷಕರ ಐದು ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ದೇಹದಲ್ಲಿ ಸಿಕ್ಕಿರುವ ಗುಂಡನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜನಾರ್ದನ ರೆಡ್ಡಿಯವರ ಬಳಿ ಬಂದೂಕು ಇಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. 2026ರ ಆರಂಭದಲ್ಲೇ ರಕ್ತಚರಿತ್ರೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ವಲಯ ಐಜಿಪಿ ವರ್ತಿಕಾ ವಟಿಯಾರ್ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಿದ್ದರು. ಇದರ ಆಧಾರದ ಮೇಲೆ ಪ್ರವೀಣ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ಗೃಹ ಇಲಾಖೆ ತನಿಖೆಗೆ ಆದೇಶಿಸಿದೆ. ಜೊತೆಗೆ, ಸ್ಥಳೀಯ ಪೆಲೀಸ್ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳ ವಿರುದ್ದವೂ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
