ಬೆಂಗಳೂರು, ಮೇ 31- ಪೂರ್ವ ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಬೀಳದ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಆರಂಭವಾಗಿಲ್ಲ. ಹೀಗಾಗಿ ಗಣನೀಯ ಪ್ರಮಾಣದಲ್ಲಿ ಜಲಾಶಯದ ನೀರು ಕಡಿಮೆಯಾಗುತ್ತಿದೆ.
ಮುಂಗಾರು ಸಕಾಲದಲ್ಲಿ ಆರಂಭಗೊಂಡು ಜಲಾನಯನ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೆ ಜಲಾಶಗಳಿಗೆ ಸಾಕಷ್ಟು ನೀರು ಹರಿದು ಬರಲಿದೆ. ಇಲ್ಲದಿದ್ದರೆ, ಜಲಾಶಯಗಳೂ ನೀರಿನ ಕೊರತೆ ಎದುರಿಸಬೇಕಾಗಬಹುದು.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಮೇ 30ರ ವೇಳೆಗೆ ಕಾವೇರಿ ಕೊಳ್ಳದ ನಾಲ್ಕು ಜಲಾಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.50 ರಷ್ಟು ಕಡಿಮೆ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಽಯಲ್ಲಿ 67.06 ಟಿಎಂಸಿ ಅಡಿ ನೀರು ನಾಲ್ಕು ಜಲಾಶಯಗಳಲ್ಲಿತ್ತು. ಆದರೆ, ಈ ವರ್ಷ ಕೇವಲ 33.83 ಟಿಎಂಸಿ ಅಡಿಯಷ್ಟಿದೆ. ಅಂದರೆ ಶೇ. 30ರಷ್ಟು ಮಾತ್ರ ನೀರಿದೆ.
ಹಾರಂಗಿ ಜಲಾಶಯದಲ್ಲಿ 2.98 ಟಿಎಂಸಿ ನೀರಿದ್ದು, ಕಳೆದ ವರ್ಷ 5.11 ಟಿಎಂಸಿ ನೀರಿತ್ತು. ಹೇಮಾವತಿ ಜಲಾಶಯದಲ್ಲಿ 14.77 ಟಿಎಂಸಿ ನೀರಿದ್ದು, ಕಳೆದ ರ್ಷ 23.31 ಟಿಎಂಸಿ ನೀರು ಸಂಗ್ರಹವಾಗಿತ್ತು. ಕೆಆರ್ಎಸ್ ಜಲಾಶಯಲ್ಲಿ 11.36 ಟಿಎಂಸಿ ನೀರಿದ್ದು, 22.89 ಟಿಎಂಸಿ ನೀರು ಕಳೆದ ವರ್ಷ ಸಂಗ್ರಹವಾಗಿತ್ತು. ಕಬಿನಿ ಜಲಾಶಯದಲ್ಲಿ 4.73 ಟಿಎಂಸಿ ನೀರಿದ್ದು, ಕಳೆದ ವರ್ಷ 15.75 ಟಿಎಂಸಿ ನೀರು ಸಂಗ್ರಹವಾಗಿತ್ತು.
ನಾಲ್ಕು ಜಲಾಶಗಳ ಗರಿಷ್ಠ ಸಾಮರ್ಥ್ಯ 114.57 ಟಿಎಂಸಿ ಆಗಿದ್ದು, ಈಗ ಕೇವಲ 33.83 ಟಿಎಂಸಿಯಷ್ಟು ಮಾತ್ರ ಇದೆ. ಕೆಆರ್ಎಸ್ ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿಗಳಾಗಿದ್ದು, ಪ್ರಸ್ತುತ 81.28 ಅಡಿಗಳಷ್ಟಿದೆ. ಕಳೆದ ವರ್ಷ 100.10 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.
ಕಳೆದ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕಾವೇರಿ ಕೊಳ್ಳದ ಜಲಾನಯನ ಭಾಗದಲ್ಲಿ ಉತ್ತಮವಾಗಿತ್ತು. ಹೀಗಾಗಿ ಈ ನಾಲ್ಕು ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ತುಂಬಿದ್ದವು. ಹಿಂಗಾರು ಮಳೆ ಕೈಕೊಟ್ಟಿತ್ತು. ಜತೆಗೆ ಬೇಸಿಗೆ ಮಳೆಯೂ ವಾಡಿಕೆ ಪ್ರಮಾಣದಲ್ಲಿ ಬೀಳಲಿಲ್ಲ. ಮಾರ್ಚ್ ಮತ್ತು ಮೇ ನಡುವಿನ ಪೂರ್ವ ಮುಂಗಾರು ಮಳೆಯೂ ಸಾಕಷ್ಟು ಪ್ರಮಾಣದಲ್ಲಿ ಆಗಲಿಲ್ಲ. ಕೆಲವೆಡೆ ಮಳೆಯಾದರೂ ಜಲಾಶಯಗಳಿಗೆ ಒಳ ಹರಿವು ಬರುವಷ್ಟು ಮಳೆಯಾಗಿಲ್ಲ.
ಬೇಸಿಗೆಯ ಬಿಸಿಲು ಹೆಚ್ಚಾದ್ದರಿಂದ ಕೃಷಿ ಹಾಗೂ ಕುಡಿಯುವ ನೀರಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಬಳಕೆಯಾಗಿದೆ. ಅಲ್ಲದೆ, ನೀರು ಆವಿಯೂ ಆಗುತ್ತದೆ. ಒಳಹರಿವು ಇಲ್ಲದೆ, ಸಂಗ್ರಹಗೊಂಡಿದ್ದ ನೀರು ಬಳಸಿದಂತೆಲ್ಲಾ ಕಡಿಮೆಯಾಗುತ್ತಾ ಬಂದಿದೆ.ಮುಂಗಾರು ಮಳೆ ಆರಂಭವಾಗಿ ವಾಡಿಕೆ ಹಾಗೂ ವಾಡಿಕೆಗಿಂತ ಹೆಚ್ಚಾದರೆ, ಜಲಾಶಯಗಳು ಭರ್ತಿಯಾಗಲಿವೆ. ಆದರೆ, ವಾಡಿಕೆಗಿಂತ ಮಳೆ ಕಡಿಮೆಯಾಗಲಿದೆ ಎಂಬ ಮುನ್ಸೂಚನೆ ಇರುವುದರಿಂದ ಆತಂಕ ಪಡುವಂತಾಗಿದೆ.
