ಮಂತ್ರಾಲಯ,ಮೇ 31- ಇಲ್ಲಿನ ತುಂಗಭದ್ರಾ ನದಿಯಲ್ಲಿ ಕಾಲು ತೊಳೆಯುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ನದಿಗೆ ಹಾರಿದ ಐವರು ಮುಳುಗಿ ಮೃತಪಟ್ಟಿರುವ ದುರ್ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ನಿನ್ನ ಸಂಜೆ ಸುಮಾರು 4.30ರ ವೇಳೆಗೆ ಬಾಲಕಿ ನದಿಯಲ್ಲಿ ಕಾಲು ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿದ್ದಳು ಎಂದು ಪೊಲೀಸ್ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಯನ್ನು ರಕ್ಷಿಸುವ ಉದ್ದೇಶದಿಂದ ಐವರು ನದಿಗೆ ಹಾರಿದ್ದರು. ಆದರೆ ದುರದೃಷ್ಟವಶಾತ್ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆದರೆ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಸತೀಶ್ (35)ಅವರ ಮಗ ಯಮನ ಚಂದ್ರ (5) ಧನುಷ್ (23) ಅವರ ಮೃತದೇಹ ಪತ್ತೆಯಾಗಿತ್ತು. ಇನ್ನೂ ರಾಘವೇಂದ್ರ (25), ಸಂಧ್ಯಾ (23) ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.
ಮೃತರ ಶವಗಳನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳ ಸಹಾಯದೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದಮಾಹಿತಿ ನೀಡಿದ್ದಾರೆ.ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಇವರು ಬಂದಿದ್ದರು.ಪೂಜೆಯ ಬಳಿಕ ನದಿಯತ್ತ ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ.
