ಬೆಂಗಳೂರು,ಏ.15- ಒಕ್ಕಲಿಗರ ಶಕ್ತಿಕೇಂದ್ರ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರಮೋದಿ ಅವರು, ಗಣ್ಯಾತಿಗಣ್ಯರ ಸಮುಖ್ಕದಲ್ಲಿ ಸಾವಿರಾರು ಸಂಖ್ಯೆಯ ಭಕ್ತರ ಹರ್ಷೋದ್ಘಾರದ ನಡುವೆ ಲೋಕಾರ್ಪಣೆಗೊಳಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ, ಪ್ರಧಾನಿ ನರೇಂದ್ರಮೋದಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೊಭಾ ಕರಂದ್ಲಾಜೆ, ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಗಣ್ಯರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಿದರು.

ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಂಡ್ಯ, ರಾಮನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು. ಇದಕ್ಕೂ ಮುನ್ನ ಬೆಳಗ್ಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆದಿಚುಂಚನಗಿರಿ ತಪೋವನಕ್ಕೆ ಆಗಮಿಸಿದ ನರೇಂದ್ರಮೋದಿ ಅವರು ರಸ್ತೆ ಮೂಲಕ ಬೆಟ್ಟಕ್ಕೆ ತೆರಳಿದರು.
ಶ್ರೀ ಕ್ಷೇತ್ರಕ್ಕೆ ಬರುತ್ತಿದ್ದಂತೆ ಮೋದಿಯವರು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದಭೂಷಣ ಡಾ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಗೆ ನಮಸ್ಕರಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಗೋರಕ್ಷನಾಥ ತಪ್ಪಸ್ಸು ಮಾಡಿರುವ ಜ್ವಾಲಾಪೀಠಕ್ಕೆ ಪ್ರಧಾನಿಯವರು ಭೇಟಿ ನೀಡಿದರು. ಬಳಿಕ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಮಂದಿರ ಲೋಕಾರ್ಪಣೆ ಬಳಿಕ ಕಾರ್ಯಕ್ರಮ ನಡೆಯುವ ವೇದಿಕೆಗೆ ಆಗಮಿಸಿ ಸೌಂದರ್ಯ ಲಹರಿ ಮತ್ತು ಶಿವಮಹಿಮ್ನಾಹಃ ಸೊ್ತ್ರೕತ್ರಂ ಪುಸ್ತಕ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನರೇಂದ್ರಮೋದಿ ಅವರು ಮಾತ್ರ ಕಾರ್ಯಕ್ರಮ ಕುರಿತು ಮಾತನಾಡಿದರು. ಪ್ರಧಾನಿ ನರೇಂದ್ರಮೋದಿ ಅವರು ಆಗಮಿಸಿದ ಹಿನ್ನೆಲೆಯಲ್ಲಿ ಮಠದ ವತಿಯಿಂದ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ವಿಶೇಷ ಮಾದರಿಯ ಮೈಸೂರು ಪೇಟವನ್ನು ತೊಡಿಸಿ ಗೌರವಿಸಲಾಯಿತು.
ಬನಾರಸ್ ಸೀರೆ ಮತ್ತು ಚಿನ್ನವನ್ನು ಬಳಸಿ ತಯಾರಿಸಿರುವ ಈ ಪೇಟದಲ್ಲಿ ಮೈಸೂರಿನ ರಾಜಲಾಂಛನವಾದ ಗಂಡಬೇರುಂಡವನ್ನು ಸೇರಿಸಲಾಗಿತ್ತು. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಭಕ್ತರ ದರ್ಶನಕ್ಕೆ ನಿರ್ಬಂಧ ಹಾಕಲಾಗಿತ್ತು.

ಮಂದಿರದ ವಿಶೇಷತೆ: ಶ್ರೀ ಮಠದ 71ನೇ ಯತಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆಯುಳ್ಳ ಶ್ರೀ ಗುರು ಭೈರವೈಕ್ಯ ಮಂದಿರವು ನೋಡುಗರ ಕಣನ ಸೆಳೆಯುತ್ತಿದೆ. ಈ ಮಂದಿರವು ಮಹಾಸ್ವಾಮೀಜಿಯವರ ಐಕ್ಯ ಸ್ಥಳವಾಗಿದೆ.
ಸ್ವಾಮೀಜಿಗಳ ಗದ್ದುಗೆ ಇರುವ ಸ್ಥಳದಲ್ಲಿ ಶ್ರೀಗುರು ಭೈರವೈಕ್ಯ ಮಂದಿರ ನಿರ್ಮಾಣವು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಕನಸಿನ ಯೋಜನೆಯಾಗಿತ್ತು. ಭೈರವೈಕ್ಯ ಮಂದಿರವು ಹೊಯ್ಸಳ, ಚಾಲುಕ್ಯ, ಚೋಳ ಮತ್ತು ಗಂಗರ ಕಾಲದ ಶಿಲ್ಪಕಲೆಗಳ ಸಮಾಗಮವಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ಈ ಮಂದಿರ ವಾಸ್ತುಶಿಲ್ಪದ ಒಂದು ಅದ್ಬುತದಂತೆ ಗೋಚರವಾಗುತ್ತದೆ.
ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಶ್ರೀಗುರು ಭೈರವೈಕ್ಯ ಮಂದಿರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ.
