ಬೆಂಗಳೂರು,ಮಾ.4- ಒಳಮೀಸಲಾತಿ ಅನ್ವಯ ಶೇ.56ರ ಮೀಸಲಾತಿಯಡಿಯಲ್ಲೇ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ಮುಂದೆ ಆಗುವ ಎಲ್ಲಾ ಅನಾಹುತಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಾಗುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಒಳಮೀಸಲಾತಿ ಅನುಷ್ಠಾನ ಕುರಿತು ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ಪ್ರಕಾರ ಶೇ.56ರ ಮೀಸಲಾತಿ ಅಡಿಯೇ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕೆಂದು ಪರಿಶಿಷ್ಟ ಸಮುದಾಯದ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿವೆ.
ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ನಿರ್ಧಾರ ಹೊರಬೀಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಸರ್ಕಾರ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.
ಹಿಂದಿನ ಮೀಸಲಾತಿ ಉಪಯೋಗಿಸಿಕೊಂಡು 54 ಸಾವಿರ ಹುದ್ದೆ ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಒಂದೂವರೆ ಲಕ್ಷ ಉದ್ಯೋಗ ಭರ್ತಿ ಮಾಡದೆ, ಮೀಸಲಾತಿ ಅನುಷ್ಠಾನಕ್ಕೆ ತರದೆ ಹಳೆಯ ಶೇ.50ರ ಮೀಸಲಾತಿಯಡಿ ನೇಮಕಾತಿ ಮಾಡಿಕೊಳ್ಳು ಮುಂದಾಗಿದೆ. ಈ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಿಂದೆ ಬಿಜೆಪಿ ಅವಧಿಯಲ್ಲಿ 50 ರಿಂದ 56% ಮೀಸಲಾತಿ ನೀಡಿದ್ದೆವು. ಅದರ ಆಧಾರದ ಮೇಲೆ ನೇಮಕಾತಿ ಮಾಡಬೇಕು. ನಿಮ ಹಣಕಾಸು ಮುಗ್ಗಟ್ಟನ್ನು ಇಟ್ಟುಕೊಂಡು ಎಷ್ಟು ನೇಮಕ ಮಾಡುತ್ತೀರೋ ಮಾಡಿ. ಆದರೆ 56% ಒಳ ಮೀಸಲಾತಿ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು.
ಕುಂಟು ನೆಪ ಹೇಳದೆ ಉದ್ಯೋಗ ನೀಡುವ ಕೆಲಸ ಮಾಡಬೇಕು. ಶೋಷಿತ, ಪೀಡಿತ ಸಮುದಾಯಕ್ಕೆ ನ್ಯಾಯ ಕೊಡಬೇಕೆಂದು 30 ವರ್ಷಗಳಿಂದ ಮೀಸಲಾತಿ ವಿಚಾರವಾಗಿ ನ್ಯಾಯಯುತ ಹೋರಾಟ ಮಾಡಿಕೊಂಡು ಬಂದಿದ್ದವು. ಶೋಷಿತ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಕಾಂಗ್ರೆಸ್ ಮಾಡಲಿಲ್ಲ. ನಮ ಸರ್ಕಾರದ ಅವಧಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಕೊಡುವ ಕೆಲಸ ಬೊಮಾಯಿ ಅವರ ಅಧಿಕಾರಾವಧಿಯಲ್ಲಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿದೆ. ಸಿಎಂ ಸಿದ್ದರಾಮಯ್ಯ ಇಂತ ಗಂಭೀರ ವಿಚಾರವನ್ನ ಹಗುರವಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಭರವಸೆ ನೀಡದೆ, ರಾಜ್ಯಪಾಲರ ಬಳಿ ಅಂಕಿತ ಕೂಡ ಹಾಕಿಸಿಕೊಂಡದ್ದಾರೆ. ಕಾಂಗ್ರೆಸ್ ಸರ್ಕಾರದ ಇಚ್ಚಾಶಕ್ತಿ ಕೊರತೆ ಇದೆ. ಹೈಕೋರ್ಟ್‌ನಲ್ಲಿ ವಾದ ಮಾಡದೆ ಸಮುದಾಯಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ ಎಂದು ದೂರಿದರು.
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡುವುದಾಗಿ ಹೇಳಿದ್ದರು. ರಾಜ್ಯದಲ್ಲಿ 2.85 ಲಕ್ಷ ಹುದ್ದೆ ಖಾಲಿ ಇದೆ. ಖಾಲಿ ಹುದ್ದೆ ಭರ್ತಿ ಮಾಡುವಂತೆ ಯುವಕರು ಪ್ರತಿಭಟನೆ ಮಾಡುತ್ತಿದ್ದಾರೆ. 50 ಸಾವಿರ ಹುದ್ದೆ ಭರ್ತಿ ಮಾಡಲು ಸರ್ಕಾರ ಹೊರಟಿದೆ. ಈಗ ಮೀಸಲಾತಿಯಲ್ಲಿ ತೊಂದರೆ ಇದೆ ಎಂದು ಭರ್ತಿ ಮಾಡಿಲ್ಲ ಎಂದರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಎಂದಿದ್ದರು. ಬಿಜೆಪಿ ಸರ್ಕಾರದಲಿ ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಅದರಂತೆ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೆವು. 17% ಮತ್ತು 7% ಗೆ ಮೀಸಲಾತಿ ಹೆಚ್ಚಿಸಿ, 24% ಎಸ್ಟಿ-ಎಸ್ಟಿ ಸಮುದಾಯಕ್ಕೆ ನೀಡಿದೆವು ಎಂದು ಹೇಳಿದರು.
ನೀವು ತಪ್ಪಿಸಿಕೊಳ್ಳುವ ಸಲುವಾಗಿ 50% ಮೀಸಲಾತಿ ಕೊಡಲು ಹೊರಟಿದ್ದೀರಿ.
ಹಿಂದುಳಿದ ವರ್ಗಗಳಿಗೆ ನೀವು ಹೇಗೆ ನ್ಯಾಯ ಕೊಡ್ತೀರಿ? ಇಷ್ಟು ಗೊಂದಲದ ಗೂಡು ಮಾಡಿದ್ದೀರಿ. ನಮಗೆ 3% ಮೀಸಲಾತಿ ಕೊಡುತ್ತೀರಾ? ಹಿಂದುಳಿದ ವರ್ಗಗಳಿಗೆ ಸಿಕ್ಕ ಅವಕಾಶ ಕಸಿದುಕೊಂಡಿದ್ದೀರಿ. ಮಕ್ಕಳ ಶಿಕ್ಷಣ, ಉದ್ಯೋಗ ಮೀಸಲಾತಿ ಕಸಿದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗಮೋಹನ್ ದಾಸ್ ಕಮಿಟಿ ವರದಿ ನೀಡಲು ನೇಮಕ ಮಾಡಿದರು. ಅಂಬೇಡ್ಕರ್ ಅವರ ಸಂವಿಧಾನ ಪ್ರಕಾರ ಮೀಸಲಾತಿ ಕೊಡಬೇಕು. ಈ ಸರ್ಕಾರ ವರದಿಯನ್ನ ಅನುಷ್ಠಾನಕ್ಕೆ ತಂದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ 139 ಸೀಟು ಗೆದ್ದಿದ್ದಾರೆ. ಅದರಲ್ಲಿ ಎಸ್ಸಿ-ಎಸ್ಟಿ ಸಮುದಾಯದವರೇ ಹೆಚ್ಚಿದ್ದಾರೆ. ಆದರೂ ಅವರು ಪ್ರಶ್ನೆ ಮಾಡದೆ ಕುಳಿತಿದ್ದಾರೆ ಎಂದು ಕಿಡಿಕಾರಿದರು.
